ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಿಹಾರ ಅರಣ್ಯೀಕರಣ ನಿಧಿಯಡಿ ಅರಣ್ಯ ಭೂಮಿ ರಕ್ಷಣೆಗೆ ಹಣ ಒದಗಿಸಲು ಅವಕಾಶವಿದ್ದು, ನಗರ ಮತ್ತು ಪಟ್ಟಣದ ಸಮೀಪ ಇರುವ ಕೋಟ್ಯಂತರ ರೂಪಾಯಿ ಬೆಲೆಬಾಳುವ ಅರಣ್ಯ ಭೂಮಿ ಒತ್ತುವರಿಯಾಗದಂತೆ ಬೇಲಿ ಹಾಕಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಅರಣ್ಯ ಪ್ರದೇಶದಲ್ಲಿ ಒತ್ತುವರಿಯಾಗಿರುವಂತಹ ಭೂಮಿ ಗುರುತಿಸಿ ಬೇಲಿ ಹಾಕಬೇಕು. ಸ್ಥಳೀಯ ಪ್ರಭೇದದ ಸಸಿಗಳನ್ನು ನೆಟ್ಟು ನೆಡುತೋಪು ಅಭಿವೃದ್ಧಿಪಡಿಸುವಂತೆ ನಿರ್ದೇಶನ ನೀಡಿದ್ದಾರೆ.
ಈ ಹಿಂದೆ ರಾಜರ ಆಳ್ವಿಕೆ ಕಾಲದಲ್ಲಿ ಮತ್ತು ಸರ್ಕಾರದಿಂದ ಅರಣ್ಯ ಎಂದು ಗೆಜೆಟ್ ಅಧಿಸೂಚನೆಯಾಗಿದ್ದರೂ ಇನ್ನೂ ಕೆಲವು ಕಡೆ ಅರಣ್ಯ ಎಂದು ಇಂಡೀಕರಣವಾಗಿಲ್ಲ. ಹೀಗಾಗಿ ಆರ್.ಟಿ.ಸಿ.ಯಲ್ಲಿ ಅರಣ್ಯ ಎಂದು ದಾಖಲಾಗದ ಕಾರಣ ಅಕ್ರಮ ಮಂಜೂರಾತಿ, ಒತ್ತುವರಿಯಾಗುತ್ತಿದೆ. ಕೂಡಲೇ ಇಂಡೀಕರಣಕ್ಕೆ ಕ್ರಮ ವಹಿಸುವಂತೆ ಸಚಿವರು ಸೂಚಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಚಿರತೆಗಳು ನಾಡಿನತ್ತ ಆಗಮಿಸುತ್ತಿದ್ದು, ಅವುಗಳನ್ನು ಹಿಡಿದು ಕಾಡಿಗೆ ಮರಳಿಸಲು ಅಥವಾ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲು ಕೂಡಲೇ ಚಿರತೆ ಕಾರ್ಯಪಡೆ ಆರಂಭಿಸುವಂತೆ ತಿಳಿಸಿದ್ದಾರೆ.



