ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಹೆಸರಿನ ಎಕ್ಸ್ ಖಾತೆಗೆ ಭಾರತದಲ್ಲಿ ನಿರ್ಬಂಧ ಹೇರಲಾಗಿದ್ದು, ಈ ಬೆನ್ನಲ್ಲೇ ಇದೀಗ ‘ಕಾಕ್ರೋಚ್ ಈಸ್ ಬ್ಯಾಕ್’ ಎಂಬ ಮತ್ತೊಂದು ಖಾತೆಯು ತೆರೆಕಂಡಿದೆ.
ಹೊಸ ಖಾತೆ ಓಪನ್
ಈ ಕುರಿತು ಪ್ರತಿಕ್ರಿಯಿಸಿರುವ ಸಿಜೆಪಿ ಸಂಸ್ಥಾಪಕ ಅಭಿಷೇಕ್ ದಿಪ್ಕೆ, ನಿರೀಕ್ಷೆಯಂತೆಯೇ ಭಾರತದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಖಾತೆಯನ್ನು ನಿರ್ಬಂಧಿಸಲಾಗಿದೆ. ಆದರೆ ಇದೀಗ ಎಕ್ಸ್ ಖಾತೆಯಲ್ಲಿ ‘ಕಾಕ್ರೋಚ್ ಈಸ್ ಬ್ಯಾಕ್’ ಎಂಬ ಹೊಸ ಖಾತೆಯನ್ನು ಪ್ರಾರಂಭಿಸಿದ್ದೇನೆ. ಈ ಕುರಿತು ಕಾನೂನು ಹೋರಾಟಕ್ಕೂ ನಾನು ಸಿದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.
ಡಿಜಿಟಲ್ ಚಳವಳಿಗೆ ಕಾರಣವೇನು?
ಇತ್ತೀಚೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಯುವಜನತೆ ಮತ್ತು ಸಾಮಾಜಿಕ ಜಾಲತಾಣ ಚಟುವಟಿಕೆಗಳ ಕುರಿತು ನೀಡಿದ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಈ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಅಭಿಷೇಕ್ ದಿಪ್ಕೆ ಎಂಬವರು ಕಾಕ್ರೋಚ್ ಜನತಾ ಪಾರ್ಟಿ ಹೆಸರಿನ ಡಿಜಿಟಲ್ ಚಳವಳಿಯನ್ನು ಆರಂಭಿಸಿದ್ದರು . ಅವರ ಹೇಳಿಕೆ ಖಂಡಿಸಿ ವಿಭಿನ್ನ ಹೆಸರಿನಲ್ಲಿ ಆರಂಭಿಸಿದ ಕಾಕ್ರೋಚ್ ಜನತಾ ಪಕ್ಷ ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಇದಕ್ಕೆ ರಾಜಕಾರಣಿಗಳು, ಕಾರ್ಯಕರ್ತರು, ಕಲಾವಿದರು ಮತ್ತು ಹೆಚ್ಚಿನ ಸಂಖ್ಯೆಯ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.



