ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಹೆಸರಿನ ಎಕ್ಸ್ ಖಾತೆಗೆ ಭಾರತದಲ್ಲಿ ನಿರ್ಬಂಧ ಹೇರಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿಜೆಪಿ ಸಂಸ್ಥಾಪಕ ಅಭಿಷೇಕ್ ದಿಪ್ಕೆ, “ನಿರೀಕ್ಷೆಯಂತೆಯೇ ಭಾರತದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಖಾತೆಯನ್ನು ನಿರ್ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.
ಏನಿದು ‘ಕಾಕ್ರೋಚ್ ಜನತಾ ಪಾರ್ಟಿ’?
ಇತ್ತೀಚೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಯುವಜನತೆ ಮತ್ತು ಸಾಮಾಜಿಕ ಜಾಲತಾಣ ಚಟುವಟಿಕೆಗಳ ಕುರಿತು ನೀಡಿದ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಈ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಅಭಿಷೇಕ್ ದಿಪ್ಕೆ ಎಂಬವರು ಕಾಕ್ರೋಚ್ ಜನತಾ ಪಾರ್ಟಿ ಹೆಸರಿನ ಡಿಜಿಟಲ್ ಚಳವಳಿಯನ್ನು ಆರಂಭಿಸಿದ್ದರು.
ರಾಜಕೀಯ, ಆಡಳಿತ ವ್ಯವಸ್ಥೆ ಮತ್ತು ಸಾಮಾಜಿಕ ವಿಚಾರಗಳ ಕುರಿತು ವ್ಯಂಗ್ಯಾತ್ಮಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದ ಈ ಖಾತೆ ಕೆಲವೇ ದಿನಗಳಲ್ಲಿ ಭಾರೀ ವೈರಲ್ ಆಗಿತ್ತು.
ಎಕ್ಸ್ ಖಾತೆ ನಿರ್ಬಂಧ
ಭಾರತದಲ್ಲಿ CJP_2029 ಹೆಸರಿನ ಎಕ್ಸ್ ಖಾತೆಯನ್ನು ತೆರೆಯಲು ಪ್ರಯತ್ನಿಸಿದಾಗ “Account Withheld in India in response to a legal demand” ಎಂಬ ಸಂದೇಶ ಕಾಣಿಸುತ್ತಿದೆ. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತ ಚರ್ಚೆ ಮತ್ತೆ ಜೋರಾಗಿದೆ. ಎಕ್ಸ್ ಖಾತೆ ನಿರ್ಬಂಧಗೊಂಡಿದ್ದರೂ, ಕಾಕ್ರೋಚ್ ಜನತಾ ಪಾರ್ಟಿ ಇನ್‌ಸ್ಟಾಗ್ರಾಂನಲ್ಲಿ ಅಚ್ಚರಿಯ ಮಟ್ಟದ ಜನಪ್ರಿಯತೆ ಗಳಿಸಿದೆ. ಕೇವಲ ಐದು ದಿನಗಳಲ್ಲಿ ಈ ಖಾತೆ 1 ಕೋಟಿ ಫಾಲೋವರ್ಸ್ ದಾಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸುದ್ದಿಯಾಗಿದೆ.



