May 22, 2026
Friday, May 22, 2026
spot_img

10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಫಿಕ್ಸ್: ಜೂ.20 ರೊಳಗೆ ಪ್ರಕ್ರಿಯೆ ಪೂರ್ಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ರಾಜ್ಯಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಅಧಿಕೃತ ದಿನಾಂಕವನ್ನು ಪ್ರಕಟಿಸಿದೆ. ಕರ್ನಾಟಕದ 4 ಪ್ರಮುಖ ಸ್ಥಾನಗಳು ಸೇರಿದಂತೆ ದೇಶದ ಒಟ್ಟು 10 ರಾಜ್ಯಗಳ 24 ರಾಜ್ಯಸಭಾ ಕ್ಷೇತ್ರಗಳಿಗೆ ಜೂನ್ 18 ರಂದು ಹೈವೋಲ್ಟೇಜ್ ಚುನಾವಣೆ ನಡೆಯಲಿದೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ದಿಗ್ವಿಜಯ್ ಸಿಂಗ್ ಅವರಂತಹ ದಿಗ್ಗಜ ನಾಯಕರ ಸಂಸತ್ ಸದಸ್ಯತ್ವದ ಅವಧಿಯು ಜೂನ್ ಮತ್ತು ಜುಲೈ ತಿಂಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ತೆರವಾಗಲಿರುವ ಸ್ಥಾನಗಳಿಗೆ ಹೊಸದಾಗಿ ಚುನಾವಣೆ ಆಯೋಜಿಸಲಾಗಿದೆ. ನಿವೃತ್ತರಾಗುತ್ತಿರುವ ಒಟ್ಟು 22 ಸಂಸದರಲ್ಲಿ 11 ಮಂದಿ ಬಿಜೆಪಿ ಹಾಗೂ ನಾಲ್ವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾಗಿದ್ದಾರೆ.

ಕೇಂದ್ರ ಚುನಾವಣಾ ಆಯೋಗದ ಪ್ರಕಟಣೆಯ ಪ್ರಕಾರ, ಇಡೀ ಚುನಾವಣಾ ಪ್ರಕ್ರಿಯೆಯು ಜೂನ್ 20 ರ ಒಳಗಾಗಿ ಮುಕ್ತಾಯಗೊಳ್ಳಲಿದೆ. ಪ್ರಮುಖ ದಿನಾಂಕಗಳ ವಿವರ ಇಲ್ಲಿದೆ:

ಅಧಿಸೂಚನೆ ಹೊರಡಿಸುವ ದಿನಾಂಕ: ಜೂನ್ 1, 2026

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಜೂನ್ 8, 2026

ನಾಮಪತ್ರಗಳ ಪರಿಶೀಲನೆ: ಜೂನ್ 9, 2026

ನಾಮಪತ್ರ ಹಿಂಪಡೆಯಲು ಕಡೆ ದಿನ: ಜೂನ್ 11, 2026

ಮತದಾನದ ದಿನಾಂಕ: ಜೂನ್ 18, 2026 (ಬೆಳಿಗ್ಗೆ 9:00 ರಿಂದ ಸಂಜೆ 4:00 ರವರೆಗೆ)

ಮತ ಎಣಿಕೆ ಮತ್ತು ಫಲಿತಾಂಶ: ಜೂನ್ 18, 2026 (ಮತದಾನ ಮುಗಿದ ತಕ್ಷಣ ಸಂಜೆ ಅಂದೇ ಫಲಿತಾಂಶ ಪ್ರಕಟ)

ಯಾವ ರಾಜ್ಯದಲ್ಲಿ ಎಷ್ಟು ಸ್ಥಾನಗಳು?

ಮುಂಬರುವ ಚುನಾವಣೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ಗುಜರಾತ್ ರಾಜ್ಯಗಳಲ್ಲಿ ತಲಾ 4 ಸ್ಥಾನಗಳು ಖಾಲಿಯಾಗುತ್ತಿವೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 3 ಸ್ಥಾನಗಳು, ಜಾರ್ಖಂಡ್‌ನಲ್ಲಿ 2 ಸ್ಥಾನಗಳು ಹಾಗೂ ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನಲ್ಲಿ ತಲಾ 1 ಸ್ಥಾನಕ್ಕೆ ಚುನಾವಣೆ ಜರುಗಲಿದೆ. ಇದರೊಂದಿಗೆ ಮಹಾರಾಷ್ಟ್ರ, ತಮಿಳುನಾಡು ಮತ್ತು ಜಾರ್ಖಂಡ್‌ನ ತಲಾ ಒಂದು ಸ್ಥಾನಕ್ಕೆ ಉಪಚುನಾವಣೆಯೂ ಎದುರಾಗುವ ಸಾಧ್ಯತೆಯಿದೆ ಎಂದು ಆಯೋಗ ತಿಳಿಸಿದೆ.

ಚುನಾವಣಾ ಆಯೋಗದ ವಿಶೇಷ ಸೂಚನೆ:

ಈ ಬಾರಿ ಮತದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಆಯೋಗವು ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ. ಮತದಾನದ ವೇಳೆ ಚುನಾವಣಾಧಿಕಾರಿಗಳು ಒದಗಿಸುವ ವಿಶೇಷ ‘ನೇರಳೆ ಸ್ಕೆಚ್ ಪೆನ್’ ಮಾತ್ರ ಬಳಸಬೇಕು. ಬೇರೆ ಯಾವುದೇ ಪೆನ್ ಬಳಸಿದರೆ ಅಂತಹ ಮತಗಳನ್ನು ಅಸಿಂಧುಗೊಳಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !