ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಏಷ್ಯಾದ ಕಡಲ ಮಾರ್ಗದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಜಾಗತಿಕ ತೈಲ ಸಾಗಣೆಯ ಪ್ರಮುಖ ಕೇಂದ್ರವಾದ ಹಾರ್ಮುಜ್ ಜಲಸಂಧಿಯಲ್ಲಿ ಬುಧವಾರ ಮತ್ತೊಂದು ವಾಣಿಜ್ಯ ಹಡಗು ದಾಳಿಗೆ ಒಳಗಾಗಿದೆ. ಸೌದಿ ಅರೇಬಿಯಾ ಧ್ವಜದ ‘ಎನ್ಸಿಸಿ ಫಜ್ರ್’ (NCC FAJR) ಎಂಬ ಬೃಹತ್ ಆಯಿಲ್ ಟ್ಯಾಂಕರ್ ಮೇಲೆ ಈ ಸಂಭವನೀಯ ದಾಳಿ ನಡೆದಿದೆ. ಇಡೀ ಹಡಗಿನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದರೂ, ಅದರಲ್ಲಿದ್ದ ಮೂವರು ಭಾರತೀಯ ಸಿಬ್ಬಂದಿ ಸೇರಿದಂತೆ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ನಿರಂತರ ನಿಗಾದಲ್ಲಿ ಕೇಂದ್ರ ಸರ್ಕಾರ
ಈ ಆತಂಕಕಾರಿ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಬಂದರು ಮತ್ತು ಹಡಗು ಸಚಿವ ಸರ್ಬಾನಂದ ಸೋನೋವಾಲ್ ಅವರು, ನಮ್ಮ ಭಾರತೀಯ ನಾವಿಕರು ಸಂಪೂರ್ಣವಾಗಿ ಕ್ಷೇಮವಾಗಿದ್ದಾರೆ ಎಂದು ತಿಳಿಸಿದ್ದಾರೆ. ಸಮುದ್ರದ ಮಧ್ಯೆ ಉಂಟಾಗಿರುವ ಈ ಪರಿಸ್ಥಿತಿಯನ್ನು ಭಾರತೀಯ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಮ್ಮ ಸಾಗರೋತ್ತರ ಸಿಬ್ಬಂದಿಯ ಸುರಕ್ಷತೆ ಮತ್ತು ಅವರ ಮುಂದಿನ ಯೋಗಕ್ಷೇಮಕ್ಕಾಗಿ ಹಡಗು ನಿರ್ವಹಣಾ ಸಂಸ್ಥೆಯೊಂದಿಗೆ ಕೇಂದ್ರ ಸರ್ಕಾರವು ನಿರಂತರ ಸಂಪರ್ಕದಲ್ಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ಸರಣಿ ದಾಳಿಗಳಿಂದ ಹೆಚ್ಚಿದ ಕಳವಳ
ಕಡಲ ಮಾರ್ಗದಲ್ಲಿ ಭಾರತೀಯ ನಾವಿಕರನ್ನು ಗುರಿಯಾಗಿಸಿ ದಾಳಿ ನಡೆಯುತ್ತಿರುವುದು ಇದು ಮೊದಲೇನಲ್ಲ. ಕೇವಲ ಒಂದು ದಿನದ ಹಿಂದೆಯಷ್ಟೇ (ಮಂಗಳವಾರ) ಲೈಬೀರಿಯಾ ದೇಶದ ಧ್ವಜ ಹೊಂದಿದ್ದ ‘ಎಂಟಿ ಫುಜೈರಾ ಎನರ್ಜಿ’ ಎಂಬ ತೈಲ ಹಡಗಿನ ಮೇಲೂ ಪರ್ಷಿಯನ್ ಗಲ್ಫ್ನಲ್ಲಿ ಕ್ಷಿಪಣಿ ಮಾದರಿಯ ವಸ್ತುವಿನಿಂದ ದಾಳಿ ನಡೆಸಲಾಗಿತ್ತು. ಆ ಹಡಗಿನಲ್ಲಿ ಆರು ಮಂದಿ ಭಾರತೀಯರಿದ್ದು, ಅವರಲ್ಲಿ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಸದ್ಯ ಗಾಯಾಳು ನಾವಿಕನನ್ನು ಚಿಕಿತ್ಸೆಗಾಗಿ ಸುರಕ್ಷಿತವಾಗಿ ದಡಕ್ಕೆ ಕರೆತರಲಾಗಿದ್ದು, ಉಳಿದ ಐವರು ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ:
ಅಂತಾರಾಷ್ಟ್ರೀಯ ನಿಯಮ ಪಾಲನೆಗೆ ಭಾರತದ ಕರೆ
ವಿಶ್ವದ ಒಟ್ಟು ಪೆಟ್ರೋಲಿಯಂ ಸಾಗಣೆಯ ಸುಮಾರು ಶೇಕಡಾ 20 ರಷ್ಟು ಭಾಗವು ಈ ಹಾರ್ಮುಜ್ ಜಲಸಂಧಿಯ ಮೂಲಕವೇ ಹಾದುಹೋಗುತ್ತದೆ. ಭಾರತವು ತನ್ನ ಕಚ್ಚಾ ತೈಲ ಆಮದಿಗಾಗಿ ಹೆಚ್ಚಾಗಿ ಈ ಮಾರ್ಗವನ್ನೇ ಆಶ್ರಯಿಸಿದೆ. ಜೊತೆಗೆ ಜಾಗತಿಕ ನಾವಿಕರ ಪಡೆಯಲ್ಲಿ ಶೇಕಡಾ 10 ರಿಂದ 12 ರಷ್ಟು ಭಾರತೀಯರೇ ಇದ್ದಾರೆ. ಹೀಗಾಗಿ, ಅಂತಾರಾಷ್ಟ್ರೀಯ ಕಡಲ ಸಾರಿಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಜಾಗತಿಕ ಸಮುದಾಯಕ್ಕೆ ಕರೆ ನೀಡಿದ್ದು, ಮುಕ್ತ ಮತ್ತು ಅಡೆತಡೆಯಿಲ್ಲದ ಹಡಗು ಸಂಚಾರಕ್ಕೆ ಒತ್ತಾಯಿಸಿದ್ದಾರೆ.



