May 22, 2026
Friday, May 22, 2026
spot_img

‘ಎದೆ ನೋವು ಸಹಿಸಲು ಸಾಧ್ಯವಾಗುತ್ತಿಲ್ಲ..’ ಕೊನೆಯ ಸಂದೇಶ ಕಳುಹಿಸಿ ಸಾವಿನ ದಾರಿ ಹಿಡಿದ ಡಾ.ಡಿ ಎಲ್ ಭಟ್ಕಳ

ಹೊಸದಿಗಂತ ಅಂಕೋಲಾ:

ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಪ್ರಸಿದ್ಧ ಹಿರಿಯ ವೈದ್ಯರಾದ ಡಾ. ದಿನೇಶ್ ಭಟ್ಕಳ ಅವರು ಬೆಳಗಾವಿಯ ತಮ್ಮ ನಿವಾಸದಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಅಪರೂಪದ ಶ್ವಾಸಕೋಶದ ಕ್ಯಾನ್ಸರ್ ಕಾಯಿಲೆಯಿಂದ ತೀವ್ರವಾಗಿ ಬಳಲುತ್ತಿದ್ದ ಅವರು, ನೋವು ತಡೆಯಲಾರದೆ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕೊನೆಯ ವಾಟ್ಸಪ್ ಸಂದೇಶದಲ್ಲಿ ಏನಿದೆ?

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮುಂಜಾನೆ 6.57ರ ಸುಮಾರಿಗೆ ಡಾ. ದಿನೇಶ್ ಅವರು ತಮ್ಮ ಸಂಸ್ಥೆಯ ಮುಖ್ಯಸ್ಥರಿಗೆ ಇಂಗ್ಲಿಷ್‌ನಲ್ಲಿ ವಾಟ್ಸಪ್ ಮೆಸೇಜ್ ಕಳುಹಿಸಿದ್ದರು. “ನನಗೆ ಎದೆ ನೋವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದಾಗಿ ನಾನು ತ್ವರಿತ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ಇದು ನನ್ನ ಸ್ವಂತ ತೀರ್ಮಾನವಾಗಿದೆ. ದಯವಿಟ್ಟು ನನ್ನ ಕುಟುಂಬಕ್ಕೆ ಸಹಾಯ ಮಾಡಿ ಹಾಗೂ ಪೊಲೀಸ್ ಕಮಿಷನರ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿ” ಎಂದು ಅವರು ತಮ್ಮ ಕೊನೆಯ ಸಂದೇಶದಲ್ಲಿ ವಿನಂತಿಸಿಕೊಂಡಿದ್ದರು. ಈ ಸಂದೇಶವನ್ನು ಕಳುಹಿಸಿದ ಬೆನ್ನಲ್ಲೇ ಬೆಳಗಾವಿಯ ಟಿಳಕವಾಡಿಯ ತಮ್ಮ ಮನೆಯ ಗ್ಯಾಲರಿಯಲ್ಲಿ ಶೂಟ್ ಮಾಡಿಕೊಂಡಿದ್ದಾರೆ.

‘ಭಟ್ಕಳ ಡಾಕ್ಟರ್’ ಎಂದೇ ಜನಪ್ರಿಯರಾಗಿದ್ದರು

ಡಾ. ದಿನೇಶ್ ಭಟ್ಕಳ ಅವರು ಮೂಲತಃ ಅಂಕೋಲಾದಲ್ಲಿ ಕಳೆದ ನಾಲ್ಕು ದಶಕಗಳಿಂದ (40 ವರ್ಷಗಳು) ವೈದ್ಯರಾಗಿ ಅಪಾರ ಸೇವೆ ಸಲ್ಲಿಸಿದ್ದರು. ಅಲ್ಲಿನ ಪಿಕಳೆ ದಂಪತಿಗಳ ‘ಕಮಲಾ ಮೆಡಿಕಲ್ ಸೆಂಟರ್’ನಲ್ಲಿ ದೀರ್ಘಕಾಲ ಮುಖ್ಯ ವೈದ್ಯರಾಗಿದ್ದ ಇವರನ್ನು ಸ್ಥಳೀಯರು ಪ್ರೀತಿಯಿಂದ ‘ಭಟ್ಕಳ್ ಡಾಕ್ಟರ್’ ಎಂದೇ ಕರೆಯುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಪಿಕಳೆ ಸಂಸ್ಥೆಗಳು ಬೆಳಗಾವಿಯ ಪ್ರಖ್ಯಾತ ಕೆ.ಎಲ್.ಇ ಸಂಸ್ಥೆಗೆ ಹಸ್ತಾಂತರಗೊಂಡ ನಂತರ, ಡಾ. ದಿನೇಶ್ ಅವರು ಸ್ಥಳೀಯ ಕಾರ್ಯದರ್ಶಿಯಾಗಿ ಸಂಸ್ಥೆಯ ಸರ್ವತೋಮುಖ ಪ್ರಗತಿಗೆ ಶ್ರಮಿಸಿದ್ದರು.

ಮೃತ ಡಾ. ದಿನೇಶ್ ಭಟ್ಕಳ ಅವರ ಪತ್ನಿ ಸಾಧನಾ ಭಟ್ಕಳ ಅವರು ಸಹ ವೈದ್ಯೆಯಾಗಿದ್ದು, ಪತಿಯ ಅಗಲಿಕೆಯಿಂದ ಕುಟುಂಬ ತೀವ್ರ ಶೋಕದಲ್ಲಿದೆ. ಇನ್ನು ಕರಾವಳಿ ಮತ್ತು ಬೆಳಗಾವಿ ಭಾಗದಲ್ಲಿ ಜನಪ್ರಿಯರಾಗಿದ್ದ ಹಿರಿಯ ವೈದ್ಯರ ನಿಧನಕ್ಕೆ ಕೆ.ಎಲ್.ಇ ಸಮೂಹ ಸಂಸ್ಥೆಗಳು, ವಿವಿಧ ವೈದ್ಯಕೀಯ ಸಂಘಟನೆಗಳು ಹಾಗೂ ನಾಡಿನ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !