ಮಕ್ಕಳು ಹಸಿರು ಸೊಪ್ಪುಗಳನ್ನು ತಿನ್ನಲು ಹಠ ಮಾಡುತ್ತಿದ್ದರೆ, ಅವರಿಗೆ ಪೋಷಕಾಂಶಯುಕ್ತ ಪಾಲಕ್ ಸೊಪ್ಪನ್ನು ನೀಡಲು ಪಾಲಕ್ ರೈಸ್ ಅತ್ಯುತ್ತಮ ಮಾರ್ಗವಾಗಿದೆ. ಕೇವಲ 15 ರಿಂದ 20 ನಿಮಿಷಗಳಲ್ಲಿ ಕುಕ್ಕರ್ ಬಳಸಿ ಮೃದುವಾಗಿ, ಉದುರು ಉದುರಾಗಿ ಈ ರೈಸ್ ಐಟಂ ಅನ್ನು ಸಿದ್ಧಪಡಿಸಬಹುದು.
ಬೇಕಾಗುವ ಸಾಮಾಗ್ರಿಗಳು:
ಪಾಲಕ್ ಸೊಪ್ಪು
ಹಸಿಮೆಣಸಿನಕಾಯಿ
ಬೆಳ್ಳುಳ್ಳಿ
ಶುಂಠಿ
ಕೊತ್ತಂಬರಿ ಸೊಪ್ಪು
ಅಕ್ಕಿ
ಎಣ್ಣೆ ಅಥವಾ ತುಪ್ಪ
ಜೀರಿಗೆ
ಪಲಾವ್ ಎಲೆ
ಚಕ್ಕೆ ಮತ್ತು ಲವಂಗ
ಈರುಳ್ಳಿ
ಹಸಿ ಬಟಾಣಿ ಅಥವಾ ಪನೀರ್ ಚೂರುಗಳು
ಲಿಂಬೆರಸ
ಉಪ್ಪು
ಮಾಡುವ ವಿಧಾನ:
ಒಂದು ಮಿಕ್ಸಿ ಜಾರ್‌ಗೆ ತೊಳೆದ ಪಾಲಕ್ ಸೊಪ್ಪು, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ. ಇದಕ್ಕೆ ಸ್ವಲ್ಪವೇ ನೀರು ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿಕೊಂಡು ಪಕ್ಕಕ್ಕೆ ಇಟ್ಟುಕೊಳ್ಳಬೇಕು. ನಂತರ ಒಂದು ಕುಕ್ಕರ್‌ನಲ್ಲಿ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ನಂತರ ಜೀರಿಗೆ, ಪಲಾವ್ ಎಲೆ, ಚಕ್ಕೆ ಮತ್ತು ಲವಂಗ ಹಾಕಿ ಸಣ್ಣ ಉರಿಯಲ್ಲಿ ಹುರಿಯಬೇಕು. ನಂತರ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ ಅದು ತಿಳಿ ಹಳದಿ ಬಣ್ಣಕ್ಕೆ ತಿರುಗುವವರೆಗೆ ಬಾಡಿಸಿಕೊಂಡ ನಂತರ ಹಸಿ ಬಟಾಣಿ ಅಥವಾ ಪನೀರ್ ಚೂರುಗಳನ್ನು ಹಾಕಿ 1 ನಿಮಿಷ ಫ್ರೈ ಮಾಡಬೇಕು ನಂತರ ರುಬ್ಬಿಟ್ಟುಕೊಂಡ ಪಾಲಕ್ ಪೇಸ್ಟ್ ಅನ್ನು ಕುಕ್ಕರ್‌ಗೆ ಸೇರಿಸಿ. ಹಸಿ ವಾಸನೆ ಹೋಗುವವರೆಗೆ ಮಧ್ಯಮ ಉರಿಯಲ್ಲಿ 2 ನಿಮಿಷ ಚೆನ್ನಾಗಿ ಕೈಯಾಡಿಸಿ. ನಂತರ ನೆನೆಸಿಟ್ಟ ಅಕ್ಕಿಯನ್ನು ನೀರು ಸೋಸಿ ಕುಕ್ಕರ್‌ಗೆ ಹಾಕಿ, ಮಸಾಲೆ ಜೊತೆ ಮೃದುವಾಗಿ ಮಿಶ್ರಣ ಮಾಡಿ.ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕುದಿಯಲು ಬಿಡಬೇಕು. ನೀರು ಕುದಿಯಲು ಆರಂಭಿಸಿದಾಗ ಲಿಂಬೆರಸ ಹಿಂಡಿ,ಕುಕ್ಕರ್ ಮುಚ್ಚಳ ಮುಚ್ಚಿ 2 ವಿಸಿಲ್ ಕೂಗಿಸಿದರೆ ಘಮಘಮಿಸುವ ಪಾಲಕ್ ರೈಸ್ ಸವಿಯಲು ಸಿದ್ಧವಾಗುತ್ತದೆ.



