ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ಜಾಗತಿಕ ಮಟ್ಟದಲ್ಲೂ ಉಂಟಾದ ತೈಲ ಅಭಾವ ದೇಶದಲ್ಲೂ ಕಾಡುತ್ತಿದೆ. ಈ ಹಿನ್ನೆಲೆ ಮುಂಬರುವ ಆಪತ್ತನ್ನು ತಡೆಯಲು ಸಂಪನ್ಮೂಲಗಳ ಮಿತ ಬಳಕೆಗೆ ಇತ್ತೀಚೆಗೆ ಪ್ರಧಾನಿ ಮೋದಿ ಅವರು ನೀಡಿದ್ದ ಕರೆಗೆ ಬಹುಭಾಷಾ ನಟ,ರಾಜ್ಯಸಭಾ ಸಂಸದ ಕಮಲ್ ಹಾಸನ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ವಾಜಪೇಯಿ ಮಾತು ನೆನಪಿಸಿಕೊಂಡ ಕಮಲ್ ಹಾಸನ್
ಈ ಕುರಿತು ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿರುವಂತೆ, ಸರ್ಕಾರಗಳು ಬರುತ್ತವೆ, ಹೋಗುತ್ತವೆ ಆದರೆ ಈ ದೇಶ ಉಳಿಯಬೇಕು. ಆದ್ದರಿಂದ ಈ ಸ್ಥಿತಿಯಲ್ಲಿ ನಾವು ಪಕ್ಷದ ರಾಜಕೀಯ ಮಾಡುವುದಕ್ಕಿಂತ ರಾಷ್ಟ್ರದ ಹಿತಕ್ಕಾಗಿ ಒಂದಾಗಬೇಕಿದೆ ಎಂದು ಕರೆ ನೀಡಿದ್ದಾರೆ.
ಮಿತ ಬಳಕೆಗೆ ಕರೆ
ಮಧ್ಯಪ್ರಾಚ್ಯದಲ್ಲಿ ಯಾವ ರೀತಿ ಯುದ್ಧದ ಕಾರ್ಮೋಡ ಇದೆ ಎಂದು ಎಲ್ಲರಿಗೂ ತಿಳಿದಿದೆ. ಇದರಿಂದಾಗಿ ನಮ್ಮ ದೇಶದಲ್ಲೂ ಕಷ್ಟಪಡುವಂತಾಗಿದೆ. ಆದರೆ ನಾವು ನಮ್ಮ ಪ್ರಧಾನಿಗಳು ಹೇಳಿದಂತೆ ದೇಶದ ಸಂಪತ್ತನ್ನು ಮಿತವಾಗಿ ಬಳಸುವ ಮೂಲಕ ಉಳಿತಾಯ ಮಾಡಬೇಕಿದೆ ಎಂದು ತಿಳಿಸಿದರು.
ಮೋದಿ ಆಡಳಿತಕ್ಕೆ ಮೆಚ್ಚುಗೆ
ಕಳೆದ ಹತ್ತು ವರ್ಷಗಳಲ್ಲಿ ಮೋದಿ ಪ್ರಧಾನಿಯಾದ ಬಳಿಕ ಸೋಲಾರ್ ಶಕ್ತಿ ಕ್ಷೇತ್ರದಲ್ಲಿ ಭಾರತ ಗಣನೀಯ ಸಾಧನೆ ಮಾಡಿದೆ. ಹಾಗೆಯೇ ಕಲ್ಲಿದ್ದಲು ಬಳಕೆ ಕಡಿಮೆಯಾಗಿ ಪರಮಾಣು ಶಕ್ತಿ ವೃದ್ಧಿ ಹೊಂದಿರುವುದು ಸಂತೋಷದ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾರ್ವಜನಿಕ ಸಾರಿಗೆ ಬಳಸಿ
ವಿಶ್ವದ ಅನೇಕ ರಾಷ್ಟ್ರಗಳು ಇಂಧನ ಬಳಕೆಗೆ ಸಂಬಂಧಿಸಿದಂತೆ ಕಠಿಣ ಕ್ರಮಗಳನ್ನು ಕೈಗೊಂಡಿದೆ. ನಾವು ಕೂಡ ಇಂಧನ ಬಳಕೆಯನ್ನು ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು ಎಂದು ಅವರು ಹೇಳಿದ್ದಾರೆ.



