ಮಳೆಗಾಲ ಮತ್ತು ಬೇಸಿಗೆಯ ಕೊನೆಯಲ್ಲಿ ಸಿಗುವ ಹಲಸಿನ ಹಣ್ಣಿನಿಂದ ಕೇವಲ ಪಾಯಸ, ಕಡುಬು ಅಷ್ಟೇ ಅಲ್ಲದೆ ರುಚಿಕರವಾದ ತಿಂಡಿಯನ್ನೂ ಮಾಡಬಹುದು. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ, ಹೊರಗಡೆ ಗರಿಗರಿಯಾದ ಮತ್ತು ಒಳಗಡೆ ಸಾಫ್ಟ್ ಆಗಿರುವ ಸಾಂಪ್ರದಾಯಿಕ ಹಲಸಿನ ಹಣ್ಣಿನ ಪಡ್ಡು ಮಾಡುವ ಸುಲಭ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
ಹಲಸಿನ ಹಣ್ಣು
ದೋಸೆ ಅಕ್ಕಿ
ಬೆಲ್ಲದ ತುರಿ
ತೆಂಗಿನಕಾಯಿ ತುರಿ
ಏಲಕ್ಕಿ
ಕಪ್ಪು ಅಥವಾ ಬಿಳಿ ಎಳ್ಳು
ಅಡುಗೆ ಸೋಡಾ
ಉಪ್ಪು
ತುಪ್ಪ ಅಥವಾ ಎಣ್ಣೆ
ಮಾಡುವ ವಿಧಾನ
ಮೊದಲು ನೆನೆಸಿದ ಅಕ್ಕಿಯಿಂದ ನೀರನ್ನು ಸಂಪೂರ್ಣವಾಗಿ ಬಸಿದು ಮಿಕ್ಸಿ ಜಾರಿಗೆ ಹಾಕಿ. ಅದಕ್ಕೆ ಹೆಚ್ಚಿದ ಹಲಸಿನ ಹಣ್ಣಿನ ತೊಳೆಗಳು, ಬೆಲ್ಲದ ತುರಿ, ತೆಂಗಿನ ತುರಿ ಮತ್ತು ಏಲಕ್ಕಿ ಸೇರಿಸಿ. ಅಗತ್ಯವಿದ್ದರೆ 1-2 ಚಮಚ ನೀರು ಚಿಮುಕಿಸಿ ನಯವಾಗಿ ರುಬ್ಬಿಕೊಳ್ಳಬೇಕು. ಹಿಟ್ಟಿನ ಹದವು ಇಡ್ಲಿ ಹಿಟ್ಟಿನಂತೆ ದಪ್ಪಗಿರಬೇಕು. ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ತೆಗೆದುಕೊಂಡು ಅದಕ್ಕೆ ಎಳ್ಳು, ಉಪ್ಪು ಮತ್ತು ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 10 ನಿಮಿಷ ಪಕ್ಕಕ್ಕೆ ಇಡಬೇಕು.
ನಂತರ ಪಡ್ಡು ಹಂಚನ್ನು ಒಲೆಯ ಮೇಲಿಟ್ಟು ಮಧ್ಯಮ ಉರಿಯಲ್ಲಿ ಕಾಯಿಸಿ. ಹಂಚಿನ ಎಲ್ಲಾ ಗುಳಿಗಳಿಗೆ ಅರ್ಧ ಚಮಚ ತುಪ್ಪ ಅಥವಾ ಎಣ್ಣೆ ಹಾಕಿ ಕಾದ ಗುಳಿಗಳಿಗೆ ಸಿದ್ಧಪಡಿಸಿದ ಹಿಟ್ಟನ್ನು ಮುಕ್ಕಾಲು ಭಾಗದಷ್ಟು ತುಂಬಿಸಬೇಕು. ನಂತರ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 2-3 ನಿಮಿಷಗಳ ಕಾಲ ಬೇಯಲು ಬಿಡಬೇಕು. ಕೆಳಭಾಗ ಹೊಂಬಣ್ಣಕ್ಕೆ ತಿರುಗಿದಾಗ, ಕಡ್ಡಿಯ ಸಹಾಯದಿಂದ ಪಡ್ಡುಗಳನ್ನು ಮಗುಚಿ ಹಾಕಿ ಮತ್ತೊಂದು ಬದಿ ಬೇಯಿಸಬೇಕು. ಈಗ ಹೊರಗಡೆ ಗರಿಗರಿಯಾದ, ಒಳಗಡೆ ಮೃದುವಾದ ಬಿಸಿಬಿಸಿ ಹಲಸಿನ ಹಣ್ಣಿನ ಸಿಹಿ ಪಡ್ಡು ಸವಿಯಲು ಸಿದ್ಧವಾಗುತ್ತದೆ. ಇದನ್ನು ತುಪ್ಪದೊಂದಿಗೆ ಅಥವಾ ಖಾರವಾದ ಶುಂಠಿ-ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.



