ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಸೋನಪ್ರಯಾಗ ಪ್ರದೇಶದಲ್ಲಿ ಭೀಕರ ಭೂಕುಸಿತ ಸಂಭವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಆತಂಕ ಮೂಡಿಸಿದೆ.
ಹನುಮಾನ್ ಬ್ಯಾರಿಯರ್ ಸಮೀಪ ಬೆಳಿಗ್ಗೆ ಬೆಟ್ಟದ ಮೇಲ್ಭಾಗದಿಂದ ಏಕಾಏಕಿ ಬಂಡೆಗಳು ಹಾಗೂ ಮಣ್ಣು ಜಾರಿಬಿದ್ದ ಪರಿಣಾಮ ಹಲವರು ಅವಶೇಷಗಳಡಿ ಸಿಲುಕಿದರು. ಸ್ಥಳೀಯರು ಮತ್ತು ಪ್ರಯಾಣಿಕರಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು.
ಅವಶೇಷಗಳಡಿ ಸಿಲುಕಿದವರು
ಭೂಕುಸಿತ ಸಂಭವಿಸಿದ ತಕ್ಷಣ SDRF ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಅವಶೇಷಗಳಡಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಸ್ಥಳೀಯ ನಿವಾಸಿಯಾಗಿದ್ದ ಒಬ್ಬ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರು ನೇಪಾಳಿ ಮೂಲದವರು ಎನ್ನಲಾಗಿದೆ.
ಇದನ್ನೂ ಓದಿ:
ಮಳೆಗಾಲಕ್ಕೂ ಮುನ್ನವೇ ಹೆಚ್ಚಿದ ಅಪಾಯ
ಪ್ರಾಥಮಿಕ ಚಿಕಿತ್ಸೆ ಬಳಿಕ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಕುರಿತು ಮಾಹಿತಿ ನೀಡಿದ ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ನಂದನ್ ಸಿಂಗ್ ರಜ್ವಾರ್, ಬೆಳಿಗ್ಗೆ 8 ಗಂಟೆ ಸುಮಾರಿಗೆ ಬೆಟ್ಟದ ಭಾಗ ಕುಸಿದಿದೆ ಎಂದು ತಿಳಿಸಿದ್ದಾರೆ.
ಎಚ್ಚರಿಕೆ ಹೆಚ್ಚಿಸಿದ ಆಡಳಿತ
ಮಳೆಗಾಲ ಆರಂಭಕ್ಕೂ ಮುನ್ನವೇ ಇಂತಹ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆ ಅಪಾಯ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲು ಸ್ಥಳೀಯ ಆಡಳಿತ ಸೂಚಿಸಿದೆ. ಪೊಲೀಸರು ಹಾಗೂ ವಿಪತ್ತು ನಿರ್ವಹಣಾ ತಂಡಗಳು ಪ್ರದೇಶದಲ್ಲಿ ನಿರಂತರ ನಿಗಾವಹಿಸಿದ್ದು, ಮತ್ತಷ್ಟು ಭೂಕುಸಿತ ಸಂಭವಿಸುವ ಸಾಧ್ಯತೆಗಳ ಪರಿಶೀಲನೆ ನಡೆಸುತ್ತಿವೆ.



