October 7, 2026
Wednesday, October 7, 2026
spot_img

ಆನ್‌ಲೈನ್ ವಂಚನೆ; ಸೋಪು ಆರ್ಡರ್ ಮಾಡಿ ಬರೋಬ್ಬರಿ 2.97 ಲಕ್ಷ ರೂ. ಕಳೆದುಕೊಂಡ ಎಲೆಕ್ಟ್ರಿಷಿಯನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರ ಜಾಲ ದಿನಕ್ಕೊಂದು ಹೊಸ ಮಾದರಿಯಲ್ಲಿ ಸಾರ್ವಜನಿಕರನ್ನು ಲೂಟಿ ಮಾಡುತ್ತಿದೆ. ಇದೀಗ ಶಿವಮೊಗ್ಗ ನಗರದಲ್ಲಿ ಇನ್‌ಸ್ಟಾಗ್ರಾಮ್ ಜಾಹೀರಾತು ನಂಬಿ ಸೋಪು ಆರ್ಡರ್ ಮಾಡಿದ ವ್ಯಕ್ತಿಯೊಬ್ಬರು ಬರೋಬ್ಬರಿ 2.97 ಲಕ್ಷ ರೂಪಾಯಿ ಕಳೆದುಕೊಂಡು ಬೀದಿಗೆ ಬಿದ್ದಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ಶಿವಮೊಗ್ಗ ನಗರದ ಗಾಂಧಿಬಜಾರ್ ನಿವಾಸಿ 38 ವರ್ಷದ ಎಲೆಕ್ಟ್ರಿಷಿಯನ್ ಸೈಬರ್ ಚೋರರ ಜಾಲಕ್ಕೆ ಬಲಿಯಾಗಿ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್ ಸೋಪ್ ಜಾಹೀರಾತು ತಂದಿಟ್ಟ ಆಪತ್ತು!

ಜುಲೈ 7 ರಂದು ಎಲೆಕ್ಟ್ರಿಷಿಯನ್ ತಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಮ್ ನೋಡುತ್ತಿದ್ದಾಗ ಆಕರ್ಷಕ ಸೋಪಿನ ಜಾಹೀರಾತೊಂದು ಕಂಡಿತ್ತು. ಅದನ್ನು ನಂಬಿದ ಅವರು ತಕ್ಷಣವೇ ಆನ್‌ಲೈನ್ ಮೂಲಕ ಸೋಪನ್ನು ಆರ್ಡರ್ ಮಾಡಿದ್ದರು. ಆದರೆ ದಿನ ಕಳೆದರೂ ಆರ್ಡರ್ ಮಾಡಿದ್ದ ಸೋಪು ಮಾತ್ರ ಮನೆಗೆ ತಲುಪಲೇ ಇಲ್ಲ.

ಗೂಗಲ್‌ನಲ್ಲಿ ಸಿಕ್ಕ ನಕಲಿ ಕೊರಿಯರ್ ನಂಬರ್

ಸೋಪು ಬಾರದಿದ್ದಾಗ ಆತಂಕಗೊಂಡ ಎಲೆಕ್ಟ್ರಿಷಿಯನ್, ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಕೊರಿಯರ್ ಸಂಸ್ಥೆಯ ಹೆಲ್ಪ್‌ಲೈನ್ ನಂಬರ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಗೂಗಲ್‌ನಲ್ಲಿ ವಂಚಕರು ಅಪ್‌ಲೋಡ್ ಮಾಡಿದ್ದ ನಕಲಿ ಕೊರಿಯರ್ ಹೆಲ್ಪ್‌ಲೈನ್ ನಂಬರ್ ಸಿಕ್ಕಿದೆ. ಆ ನಂಬರ್‌ಗೆ ಕರೆ ಮಾಡಿದಾಗ, ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿಯು ಕೊರಿಯರ್ ಅಪ್‌ಡೇಟ್ ಮಾಡಲು ತಾನು ಕಳುಹಿಸುವ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡುವಂತೆ ಸೂಚಿಸಿದ್ದಾನೆ.

ಅದರಂತೆ ಎಲೆಕ್ಟ್ರಿಷಿಯನ್ ಲಿಂಕ್ ಮೇಲೆ ಕ್ಲಿಕ್ ಮಾಡುತ್ತಿದ್ದಂತೆಯೇ ಮೊಬೈಲ್‌ಗೆ ಬ್ಯಾಂಕ್ ವ್ಯವಹಾರದ ಹತ್ತಾರು ಮೆಸೇಜ್‌ಗಳು ದಿಢೀರನೆ ಬರಲಾರಂಭಿಸಿವೆ. ಇದರಿಂದ ತೀವ್ರ ಗೊಂದಲಕ್ಕೀಡಾದ ಎಲೆಕ್ಟ್ರಿಷಿಯನ್ ಗಾಬರಿಯಿಂದ ಆ ಲಿಂಕ್ ಅನ್ನು ಡಿಲೀಟ್ ಮಾಡಿದ್ದರು.

ಇದನ್ನೂ ಓದಿ:

ಮಗನ ಸ್ಕೂಲ್ ಫೀಸ್ ಕಟ್ಟಲು ಹೋದಾಗ ಕಾದಿತ್ತು ಬಿಗ್ ಶಾಕ್!

ಲಿಂಕ್ ಡಿಲೀಟ್ ಮಾಡಿದ ಕಾರಣ ತಾನು ಸೇಫ್ ಎಂದುಕೊಂಡಿದ್ದ ವ್ಯಕ್ತಿಗೆ ಕೆಲವು ದಿನಗಳ ಬಳಿಕ ಅಸಲಿ ಶಾಕ್ ಎದುರಾಗಿದೆ. ತಮ್ಮ ಮಗನ ಶಾಲಾ ಶುಲ್ಕವನ್ನು ಪಾವತಿಸಲು ಅವರು ಶಾಲೆಗೆ ತೆರಳಿ ಹಣ ಪಾವತಿಸಲು ಮುಂದಾದಾಗ ಬ್ಯಾಂಕ್ ಖಾತೆಯಲ್ಲಿ ಹಣವೇ ಇರಲಿಲ್ಲ. ತಕ್ಷಣವೇ ಬ್ಯಾಂಕ್‌ಗೆ ಓಡಿ ಹೋಗಿ ಪಾಸ್‌ಬುಕ್ ಎಂಟ್ರಿ ಮಾಡಿಸಿ ಪರಿಶೀಲಿಸಿದಾಗ, ವಂಚಕರು ಎರಡು ಬಾರಿ ತಲಾ 1 ಲಕ್ಷ ರೂ. ಹಾಗೂ ಮತ್ತೊಮ್ಮೆ 97 ಸಾವಿರ ರೂಪಾಯಿ ಸೇರಿ ಒಟ್ಟು 2.97 ಲಕ್ಷ ರೂ. ಖಾತೆಯಿಂದ ಲೂಟಿ ಮಾಡಿರುವುದು ಪತ್ತೆಯಾಗಿದೆ.

ಈ ದೂರಿಗಳ ಹಿನ್ನೆಲೆಯಲ್ಲಿ ಸದ್ಯ ಶಿವಮೊಗ್ಗದ ಸೈಬರ್ ಆರ್ಥಿಕ ಮತ್ತು ನಾರ್ಕೋಟಿಕ್ಸ್ ಅಪರಾಧ (CEN) ಪೊಲೀಸ್ ಠಾಣೆಯಲ್ಲಿ ಅಧಿಕೃತ ಪ್ರಕರಣ ದಾಖಲಾಗಿದ್ದು, ಪೊಲೀಸರು ವಂಚಕರ ಬ್ಯಾಂಕ್ ಖಾತೆಗಳ ಬೆನ್ನುಹತ್ತಿ ತನಿಖೆ ತೀವ್ರಗೊಳಿಸಿದ್ದಾರೆ.

Must Read