May 23, 2026
Saturday, May 23, 2026
spot_img

IPL | 255 ರನ್ ಚೇಸ್‌ ಮಾಡೋದೇ ಕಷ್ಟ: ಸೋಲಿಗೆ ಕಾರಣ ಬಿಚ್ಚಿಟ್ಟ ಪಾಟಿದಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್‌ನಲ್ಲಿ ನಡೆದ ಐಪಿಎಲ್ 2026ರ ಮಹತ್ವದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 55 ರನ್‌ಗಳ ಅಂತರದಿಂದ ಸೋಲು ಕಂಡಿತು. ಬೃಹತ್ ಗುರಿ ಬೆನ್ನಟ್ಟಿದರೂ ಆರ್‌ಸಿಬಿ ಬ್ಯಾಟರ್‌ಗಳಿಗೆ ಎದುರಾಳಿ ಬೌಲರ್‌ಗಳ ಶಿಸ್ತುಬದ್ಧ ದಾಳಿ ದೊಡ್ಡ ಸವಾಲಾಗಿ ಪರಿಣಮಿಸಿತು.

ಪಂದ್ಯದ ನಂತರ ಮಾತನಾಡಿದ ನಾಯಕ ರಜತ್ ಪಾಟಿದಾರ್, ಸೋಲಿನ ಹಿಂದಿನ ಪ್ರಮುಖ ಕಾರಣಗಳನ್ನು ವಿವರಿಸಿದರು.

‘255 ರನ್‌ವೇ ಪಂದ್ಯ ತಿರುಗಿಸಿತು’

ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿ 255 ರನ್‌ಗಳ ಭಾರೀ ಮೊತ್ತ ಕಲೆಹಾಕಿತು. ಎದುರಾಳಿ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದರು. ಇಷ್ಟು ದೊಡ್ಡ ಮೊತ್ತ ಬೆನ್ನಟ್ಟುವುದು ಯಾವ ತಂಡಕ್ಕೂ ಸುಲಭವಲ್ಲ ಎಂದು ಪಾಟಿದಾರ್ ಒಪ್ಪಿಕೊಂಡರು.

ಸ್ಲೋ ಬಾಲ್, ಯಾರ್ಕರ್‌ಗೆ ಸಿಲುಕಿದ ಆರ್‌ಸಿಬಿ

ಹೈದರಾಬಾದ್ ಪಿಚ್ ಬ್ಯಾಟಿಂಗ್‌ಗೆ ನೆರವಾದರೂ, ಎಸ್‌ಆರ್‌ಎಚ್ ಬೌಲರ್‌ಗಳು ಚಾಣಾಕ್ಷತನದಿಂದ ಸ್ಲೋ ಬೌನ್ಸರ್ ಮತ್ತು ಯಾರ್ಕರ್‌ಗಳನ್ನು ಬಳಸಿ ಆರ್‌ಸಿಬಿ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿದರು. ಪಿಚ್‌ನ ಗ್ರಿಪ್ ಅನ್ನು ಸರಿಯಾಗಿ ಬಳಸಿಕೊಂಡ ಬೌಲರ್‌ಗಳು ರನ್ ವೇಗವನ್ನು ನಿಯಂತ್ರಿಸಿದರು ಎಂದು ಪಾಟಿದಾರ್ ಹೇಳಿದರು.

ಇದನ್ನೂ ಓದಿ:

ಸೋಲಿನ ನಡುವೆಯೂ ಟಾಪ್-2 ಸ್ಥಾನ

ಪಂದ್ಯ ಸೋತಿದ್ದರೂ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಮೊದಲ ಕ್ವಾಲಿಫೈಯರ್‌ಗೆ ಪ್ರವೇಶ ಪಡೆದಿದೆ. ಇದೀಗ ಮೇ 26ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಮಹತ್ವದ ಪ್ಲೇಆಫ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.

‘ಗೆಲ್ಲಲು ಪ್ರಯತ್ನಿಸಿದ್ದೇವೆ’

“ನಮ್ಮ ಮೊದಲ ಗುರಿ ಪಂದ್ಯ ಗೆಲ್ಲುವುದೇ ಆಗಿತ್ತು. ಆದರೆ ಎದುರಾಳಿ ಬೌಲರ್‌ಗಳ ಯೋಜಿತ ದಾಳಿ ನಮ್ಮ ಮೇಲೆ ಪರಿಣಾಮ ಬೀರಿತು,” ಎಂದು ರಜತ್ ಪಾಟಿದಾರ್ ಪ್ರತಿಕ್ರಿಯಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !