July 24, 2026
Friday, July 24, 2026
spot_img

ಖಾಕಿ ಕರ್ತವ್ಯದ ಜತೆ ಸಮಾಜಮುಖಿ ಸೇವೆಗೆ ಸಂದ ಗೌರವ: ಎಸಿಪಿ ರಾಜೇಶ್‌ ಮುಡಿಗೇರಿದ ‘ಡಿಜಿ ಮೆಡಲ್’

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಕರ್ತವ್ಯದ ಜತೆಗೆ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಬೆಂಗಳೂರು ಸಿಸಿಬಿ (CCB) ಎಸಿಪಿ ಎಲ್.ವೈ. ರಾಜೇಶ್‌ಗೆ ಅತ್ಯುತ್ತಮ ಸೇವೆ ಮತ್ತು ತನಿಖೆಗಾಗಿ ಪ್ರತಿಷ್ಠಿತ ‘ಡಿಜಿ ಪದಕ’ ಪ್ರದಾನ ಮಾಡಿ ಗೌರವಿಸಲಾಗಿದೆ.

ಬೆಂಗಳೂರು ನಗರವನ್ನು ಡ್ರಗ್ಸ್ ಜಾಲದಿಂದ ಮುಕ್ತಗೊಳಿಸಲು ಅವರು ನಡೆಸಿದ ನಿರಂತರ ಕಾರ್ಯಾಚರಣೆಗಳು, ಅಪರಾಧ ಮುಕ್ತ ಸ್ವಾಸ್ಥ್ಯ ಸಮಾಜ ನಿರ್ಮಾಣದ ಕಲ್ಪನೆ ಹಾಗೂ ಇಲಾಖೆಯಲ್ಲಿ ಅವರು ಸಲ್ಲಿಸಿದ ಸುದೀರ್ಘ ಸೇವೆಯನ್ನು ಗುರುತಿಸಿ ಈ ಹೆಮ್ಮೆಯ ಪುರಸ್ಕಾರವನ್ನು ನೀಡಲಾಗಿದೆ.

ಫೇಲಾದ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಆಪತ್ಬಾಂಧವ!

ಓರ್ವ ಪೊಲೀಸ್ ಅಧಿಕಾರಿಗೆ ಅಪರಾಧ ತಡೆ ಮತ್ತು ಆರೋಪಿಗಳ ಬಂಧನವೇ ಪ್ರಮುಖ ಕರ್ತವ್ಯವಾಗಿರುತ್ತದೆ. ಆದರೆ ಎಸಿಪಿ ರಾಜೇಶ್ ತಮ್ಮ ಖಾಕಿ ವ್ಯಾಪ್ತಿಯನ್ನೂ ಮೀರಿ ಸಮಾಜದ ಹಿತ ರಕ್ಷಣೆಗೆ ನಿಂತಿದ್ದಾರೆ. ಪ್ರತಿ ವರ್ಷ ಶಾಲಾ ಹಂತದಲ್ಲಿ ಫೇಲ್ ಆಗುವ ಬಡ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ವಿಶೇಷ ಶೈಕ್ಷಣಿಕ ಶಿಬಿರಗಳನ್ನು ಸ್ವಂತ ಆಸಕ್ತಿಯಿಂದ ಆಯೋಜಿಸುತ್ತಾ ಬಂದಿದ್ದಾರೆ. ಈ ಮೂಲಕ ಹಾದಿ ತಪ್ಪಬಹುದಾದ ನೂರಾರು ಮಕ್ಕಳ ಭವಿಷ್ಯಕ್ಕೆ ಹೊಸ ಬೆಳಕು ನೀಡಿ, ಅವರ ಶೈಕ್ಷಣಿಕ ಪ್ರಗತಿಗೆ ಕಾರಣವಾಗಿದ್ದಾರೆ.

ವಿವಿಧ ಇಲಾಖೆಗಳಲ್ಲಿ ದಕ್ಷ ಸೇವೆ

ಎಲ್.ವೈ. ರಾಜೇಶ್ ಅವರು ಬೆಂಗಳೂರಿನ ಪ್ರಮುಖ ಪೊಲೀಸ್ ಠಾಣೆಗಳಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ್ದಲ್ಲದೆ, ಭ್ರಷ್ಟಾಚಾರ ನಿರೋಧಕ ಸಂಸ್ಥೆಯಾದ ಲೋಕಾಯುಕ್ತವಿಭಾಗದಲ್ಲೂ ಹಿರಿಯ ಅಧಿಕಾರಿಯಾಗಿ ಕರ್ತವ್ಯ ನಿಭಾಯಿಸಿ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದರು.

ಖಾಕಿಯ ಆಚೆಗಿನ ಸಾಹಸ:

ತಾವು ಕೆಲಸ ಮಾಡಿದ ಪ್ರತಿಯೊಂದು ಪೊಲೀಸ್ ಠಾಣೆಯ ಸರಹದ್ದಿನಲ್ಲೂ ಅಪರಾಧ ದರವನ್ನು ಕಡಿತಗೊಳಿಸಿ, ಸಾರ್ವಜನಿಕರೊಂದಿಗೆ ಸೌಹಾರ್ದಯುತ ವಾತಾವರಣ ನಿರ್ಮಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಇವರ ಈ ಬಹುಮುಖ ಸೇವೆಗೆ ಈಗಾಗಲೇ ಇಲಾಖೆಯ ಹಾಗೂ ನೂರಾರು ಸಂಘ-ಸಂಸ್ಥೆಗಳ ಪ್ರಶಸ್ತಿ, ಪದಕಗಳು ಒಲಿದು ಬಂದಿವೆ.

ಇದನ್ನೂ ಓದಿ:

ಸಿನಿಮಾ ನಟನ ಹೆಮ್ಮೆಯ ತಂದೆ:

ಕನ್ನಡ ಚಿತ್ರರಂಗದ ಇತ್ತೀಚಿನ ಸೂಪರ್ ಹಿಟ್ ಸಿನಿಮಾ ‘ಭೀಮ’ ಖ್ಯಾತಿಯ ಯುವ ನಟ ಜಯಸೂರ್ಯರ ತಂದೆಯೂ ಆಗಿರುವ ಎಲ್.ವೈ. ರಾಜೇಶ್, ತಮ್ಮ ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಇಡೀ ಪೊಲೀಸ್ ಇಲಾಖೆಗೆ ಮಾದರಿಯಾಗಿದ್ದಾರೆ.

ಅಪರಾಧ ಜಗತ್ತಿನ ಹೆಡೆಮುರಿ ಕಟ್ಟುವ ಸಿಂಗಂ ಆಗಿಯೂ, ಬಡ ಮಕ್ಕಳ ಪಾಲಿನ ಸದ್ಗುರುವಾಗಿಯೂ ಕಾಣಿಸಿಕೊಳ್ಳುವ ಇಂತಹ ದಕ್ಷ ಅಧಿಕಾರಿಗೆ ಡಿಜಿ ಪದಕ ಲಭಿಸಿರುವುದು ಇಡೀ ಖಾಕಿ ಪಡೆಗೆ ಹೆಮ್ಮೆಯ ತಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !