ಬೇಸಿಗೆ ಇರಲಿ ಅಥವಾ ಮಳೆಗಾಲ, ಜಿಡ್ಡಿನ ತ್ವಚೆ (Oily Skin) ಇರುವವರಿಗೆ ಮುಖದ ಮೇಲಿನ ಅತಿಯಾದ ಎಣ್ಣೆ ಪಸೆ ಮತ್ತು ಅದರಿಂದ ಉಂಟಾಗುವ ಬ್ಲ್ಯಾಕ್‌ಹೆಡ್ಸ್ ಹಾಗೂ ಮೊಡವೆಗಳ ಕಾಟ ದೊಡ್ಡ ತಲೆನೋವಾಗಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಕೀಮ್‌ಗಳಿಗಿಂತ ನೈಸರ್ಗಿಕ ಮನೆಮದ್ದುಗಳು ಚರ್ಮಕ್ಕೆ ಯಾವುದೇ ಅಡ್ಡಪರಿಣಾಮ ಬೀರದೆ ಅತ್ಯುತ್ತಮ ರಕ್ಷಣೆ ನೀಡುತ್ತವೆ. ಚರ್ಮದ ರಂಧ್ರಗಳನ್ನು ಆಳವಾಗಿ ಸ್ವಚ್ಛಗೊಳಿಸಿ, ಜಿಡ್ಡಿನಂಶವನ್ನು ಸಂಪೂರ್ಣವಾಗಿ ಹತೋಟಿಗೆ ತರಲು ಸಹಾಯ ಮಾಡುವ 3 ಸುಲಭ ಹೋಮ್ ಮೇಡ್ ಫೇಸ್‌ಪ್ಯಾಕ್‌ಗಳ ಬಗ್ಗೆ ತಿಳಿಯೋಣ.
ಜಿಡ್ಡಿನ ತ್ವಚೆಗೆ ಹೋಮ್ ಮೇಡ್ ಫೇಸ್‌ಪ್ಯಾಕ್‌ಗಳು:
ಮುಲ್ತಾನಿ ಮಿಟ್ಟಿ ಮತ್ತು ರೋಸ್ ವಾಟರ್ ಪ್ಯಾಕ್
ತಕ್ಷಣವೇ ಅತಿಯಾದ ಎಣ್ಣೆ ಪಸೆಯನ್ನು ಹೀರಿಕೊಳ್ಳಲು ಮತ್ತು ಆಳವಾದ ಸ್ವಚ್ಛತೆಗೆ ಇದು ಅತ್ಯುತ್ತಮವಾಗಿದೆ. ಒಂದು ಬೌಲ್‌ನಲ್ಲಿ 2 ಚಮಚ ಮುಲ್ತಾನಿ ಮಿಟ್ಟಿ, 1 ರಿಂದ 2 ಚಮಚ ರೋಸ್ ವಾಟರ್ ಹಾಕಿ ಯಾವುದೇ ಗಂಟುಗಳಿಲ್ಲದಂತೆ ನಯವಾದ ಪೇಸ್ಟ್ ಮಾಡಿಕೊಂಡು ಕಣ್ಣಿನ ಭಾಗವನ್ನು ಬಿಟ್ಟು ಮುಖ ಮತ್ತು ಕುತ್ತಿಗೆಗೆ ಸಮನಾಗಿ ಹಚ್ಚಿ. 10–15 ನಿಮಿಷ ಸಂಪೂರ್ಣವಾಗಿ ಒಣಗಲು ಬಿಟ್ಟು, ನಂತರ ತಣ್ಣೀರಿನಿಂದ ಮುಖ ತೊಳೆಯಬೇಕು. ಇದನ್ನು ವಾರದಲ್ಲಿ ಒಂದು ಅಥವಾ ಎರಡು ಬಾರಿ ಬಳಸಬಹುದು.
ಕಡ್ಲೆಹಿಟ್ಟು ಮತ್ತು ಮೊಸರಿನ ಪ್ಯಾಕ್
ಡೆಡ್ ಸ್ಕಿನ್‌ನನ್ನು ತೆಗೆದುಹಾಕಲು ಮತ್ತು ಚರ್ಮದ ತೇವಾಂಶವನ್ನು ಕಾಪಾಡಲು ಸಹಕಾರಿಯಾಗಿದೆ. ಚಮಚ ಕಡ್ಲೆಹಿಟ್ಟು, 1 ಚಮಚ ಗಟ್ಟಿ ಮೊಸರು, 1 ಚಿಟಿಕೆ ಕಸ್ತೂರಿ ಅರಿಶಿನವನ್ನು ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ಸಿದ್ಧಪಡಿಸಿಕೊಂಡು ಮುಖಕ್ಕೆ ಹಚ್ಚಿ 15 ನಿಮಿಷ ಹಾಗೇ ಬಿಡಬೇಕು. ನಂತರ ಮುಖ ತೊಳೆಯುವಾಗ ವೃತ್ತಾಕಾರದಲ್ಲಿ ಲಘುವಾಗಿ ಮಸಾಜ್ ಮಾಡುತ್ತಾ ಉಗುರುಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು. ಇದನ್ನು ವಾರದಲ್ಲಿ ಎರಡು ಬಾರಿ ಬಳಸಬಹುದು.
ಓಟ್ಸ್ ಮತ್ತು ಜೇನುತುಪ್ಪದ ಪ್ಯಾಕ್
ಚರ್ಮದ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಜಿಡ್ಡಿನಂಶವನ್ನು ನಿಯಂತ್ರಿಸಲು ಇದು ಉತ್ತಮವಾಗಿದೆ. 2 ಚಮಚ ಓಟ್ಸ್ ಪುಡಿ, 1 ಚಮಚ ಶುದ್ಧ ಜೇನುತುಪ್ಪ, 1 ಚಮಚ ನೀರು ಅಥವಾ ನಿಂಬೆರಸವನ್ನು ಒಟ್ಟಿಗೆ ಸೇರಿಸಿ ಗಟ್ಟಿಯಾದ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿ 15 ನಿಮಿಷ ಒಣಗಲು ಬಿಡಬೇಕು. ನಂತರ ಕೈಗಳನ್ನು ಸ್ವಲ್ಪ ಒದ್ದೆ ಮಾಡಿಕೊಂಡು ಮುಖವನ್ನು ಒಂದು ನಿಮಿಷ ಸ್ಕ್ರಬ್ ಮಾಡಿ, ಆಮೇಲೆ ನೀರಿನಿಂದ ಸ್ವಚ್ಛಗೊಳಿಸಬೇಕು. ಇದನ್ನು ವಾರದಲ್ಲಿ 2 ರಿಂದ 3 ಬಾರಿ ಬಳಸಬಹುದು.
ಜಿಡ್ಡಿನ ತ್ವಚೆಯವರಿಗಾಗಿ ಕೆಲವು ಟಿಪ್ಸ್:
ಯಾವುದೇ ಫೇಸ್‌ಪ್ಯಾಕ್ ಹಚ್ಚುವ ಮುನ್ನ ಮುಖವನ್ನು ಮೃದುವಾದ ಫೇಸ್‌ವಾಶ್‌ನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು.
ಪ್ಯಾಕ್ ಬಳಸಿದ ನಂತರ ಚರ್ಮವು ಅತಿಯಾಗಿ ಒಣಗದಂತೆ ತಡೆಯಲು ಹಗುರವಾದ, ಆಯಿಲ್-ಫ್ರೀ ಮೊಯಿಶ್ಚರೈಸರ್ ಹಚ್ಚುವುದನ್ನು ಮರೆಯಬಾರದು.
ಹೊಸ ಫೇಸ್‌ಪ್ಯಾಕ್ ಬಳಸುವ ಮೊದಲು ಕೈಯ ಒಳಭಾಗದಲ್ಲಿ ಪ್ಯಾಚ್ ಟೆಸ್ಟ್ ಮಾಡಿಕೊಳ್ಳುವುದು ಒಳ್ಳೆಯದು.



