ಹೊಸದಿಗಂತ ಡಿಜಿಟೆಲ್ ಡೆಸ್ಕ್:
ದೇಶಾದ್ಯಂತ ಸಾರ್ವಜನಿಕರಿಗೆ ಮತ್ತೊಮ್ಮೆ ಇಂಧನ ದರ ಏರಿಕೆಯ ಬರೆ ಬಿದ್ದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ತಲ್ಲಣಗಳ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸತತವಾಗಿ ಹೆಚ್ಚಿಸುತ್ತಿದ್ದು, ಮೇ ತಿಂಗಳೊಂದರಲ್ಲೇ ಇದು ಮೂರನೇ ಭಾರಿ ಏರಿಕೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಈಗ 108 ರ ಗಡಿ ತಲುಪಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.
ಬೆಂಗಳೂರಿನ ಇಂದಿನ ಲೇಟೆಸ್ಟ್ ದರಗಳು
ಪೆಟ್ರೋಲ್ ಪ್ರತಿ ಲೀಟರ್‌ಗೆ 107.14 ರಿಂದ 108.09 ಕ್ಕೆ ಹೆಚ್ಚಳವಾಗಿದ್ದು, ಮೇ ಆರಂಭದಲ್ಲಿ ಇದು 102.92 ರಷ್ಟಿತ್ತು. ಡೀಸೆಲ್ ಪ್ರತಿ ಲೀಟರ್‌ಗೆ 94.10 ರಿಂದ 95.04 ಕ್ಕೆ ಏರಿಕೆಯಾಗಿದ್ದು, ಮೇ ಆರಂಭದಲ್ಲಿ 90.99 ರಷ್ಟಿತ್ತು. ಇನ್ನು ಸಿಎನ್‌ಜಿ ದರದಲ್ಲೂ ಪ್ರತಿ ಕೆಜಿಗೆ ₹1 ಹೆಚ್ಚಳವಾಗಿದ್ದು, ಸಿಟಿಯಲ್ಲಿ ಇಂದಿನ ದರ 77.09 ಆಗಿದೆ.
ದಿಢೀರ್ ಬೆಲೆ ಏರಿಕೆಗೆ ಕಾರಣಗಳೇನು?
ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಉದ್ವಿಗ್ನತೆಯಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆ ಸಂಪೂರ್ಣ ತಲ್ಲಣಗೊಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ $110 ರಿಂದ $114 ಕ್ಕೆ ಜಿಗಿದಿದೆ. ಭಾರತವು ತನ್ನ ಬಳಕೆಯ ಶೇ. 90 ರಷ್ಟು ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಈ ಬೆಲೆ ಏರಿಕೆ ನೇರವಾಗಿ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಿದೆ.
ಸಾರ್ವಜನಿಕರ ಆಕ್ರೋಶ:
ಮೇ ತಿಂಗಳ ಆರಂಭದಿಂದ ಇಂದಿನವರೆಗೆ ಕೇವಲ ಮೂರೇ ವಾರಗಳಲ್ಲಿ ಲೀಟರ್ ಪೆಟ್ರೋಲ್ ಮೇಲೆ ಸುಮಾರು 5 ರೂ.ಗಳಷ್ಟು ಏರಿಕೆಯಾಗಿದ್ದು, ಇದರಿಂದ ಕೇವಲ ವಾಹನ ಸವಾರರಷ್ಟೇ ಅಲ್ಲದೆ, ಅಗತ್ಯ ವಸ್ತುಗಳ ಸಾಗಣೆ ವೆಚ್ಚ ಹೆಚ್ಚಳವಾಗಿ ತರಕಾರಿ, ದಿನಸಿ ಸಾಮಗ್ರಿಗಳ ಬೆಲೆಯೂ ಏರಿಕೆಯಾಗುವ ಆತಂಕವೂ ಇದೀಗ ಎದುರಾಗಿದೆ.



