ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವ ಪರಂಪರೆಯ ತಾಣವಾದ ಹಂಪಿಯಲ್ಲಿ ಇತಿಹಾಸ ಸಂಶೋಧನೆಯಲ್ಲಿ ಒಂದು ಮಹತ್ತರ ಮೈಲಿಗಲ್ಲು ಸ್ಥಾಪನೆಯಾಗಿದೆ. ಹಂಪಿಯ ಪ್ರಸಿದ್ಧ ಹಜಾರ ರಾಮ ದೇವಸ್ಥಾನದ ಆವರಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ಹಂಪಿ ವೃತ್ತದ ವತಿಯಿಂದ ನಡೆಯುತ್ತಿರುವ ವೈಜ್ಞಾನಿಕ ಉತ್ಖನನದ ವೇಳೆ, ವಿಜಯನಗರ ಸಾಮ್ರಾಜ್ಯದ ಕಾಲದ ಬೃಹತ್ ಮತ್ತು ಪ್ರಾಚೀನ ಒಳಚರಂಡಿ ವ್ಯವಸ್ಥೆಯು ಪತ್ತೆಯಾಗಿದೆ.
ಅಷ್ಟೇ ಅಲ್ಲದೆ, ಕಳೆದ ಕೆಲವು ವಾರಗಳಿಂದ ಇಲ್ಲಿ ನಡೆಯುತ್ತಿರುವ ಸಂಶೋಧನೆಯ ಸರಣಿ ಆವಿಷ್ಕಾರಗಳಿಗೆ ಮತ್ತಷ್ಟು ಪುಷ್ಟಿ ನೀಡುವಂತೆ, ಉತ್ಖನನದ ವೇಳೆ ಇನ್ನೂ ಎರಡು ಅತ್ಯಮೂಲ್ಯ ಆಳ್ವಾರ್ ಮೂರ್ತಿಗಳು ಬೆಳಕಿಗೆ ಬಂದಿವೆ. ಇದಕ್ಕೂ ಮುನ್ನ ನಡೆದ ಉತ್ಖನನದಲ್ಲಿ ಜೈನ ದೇವಾಲಯದ ಮೇಲ್ಛಾವಣಿಯ ಅವಶೇಷಗಳು ಹಾಗೂ ಇನ್ನು ಎರಡು ಆಳ್ವಾರ್ ಮೂರ್ತಿಗಳನ್ನು ASI ಪತ್ತೆ ಮಾಡಿತ್ತು.
ಅತ್ಯಾಧುನಿಕ ನೀರು ನಿರ್ವಹಣೆ ಮತ್ತು ಧಾರ್ಮಿಕ ಆಚರಣೆಯ ಕೊಂಡಿ:
ಈ ಬಗ್ಗೆ ಹಂಪಿ ವೃತ್ತದ ಅಧೀಕ್ಷಕ ಪುರಾತತ್ವ ತಜ್ಞ ಕೆ. ರಾಮಕೃಷ್ಣನ್ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿ, ಈಗ ಪತ್ತೆಯಾಗಿರುವ ಒಳಚರಂಡಿ ವ್ಯವಸ್ಥೆಯು ವಿಜಯನಗರ ಕಾಲದಲ್ಲಿ ದೇವಸ್ಥಾನದಲ್ಲಿ ಅಳವಡಿಸಲಾಗಿದ್ದ ಅತ್ಯಾಧುನಿಕ ನೀರು ನಿರ್ವಹಣಾ ಪದ್ಧತಿ ಮತ್ತು ಧಾರ್ಮಿಕ ಆಚರಣೆಯ ಭಾಗವಾಗಿತ್ತು ಎಂದು ನಂಬಲಾಗಿದೆ ಎಂದು ತಿಳಿಸಿದ್ದಾರೆ.
ಪುರಾತತ್ವ ತಜ್ಞರ ಪ್ರಕಾರ, ಗ್ರಾನೈಟ್ (ಕೃಷ್ಣಶಿಲೆ) ಕಲ್ಲಿನ ಚಪ್ಪಡಿಗಳಿಂದ ನಿರ್ಮಿಸಲಾದ ಈ ಬೃಹತ್ ಚರಂಡಿಯನ್ನು ಮುಖ್ಯವಾಗಿ ಎರಡು ಕಾರಣಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಒಂದು ಮಳೆಗಾಲದಲ್ಲಿ ದೇವಸ್ಥಾನದ ಒಳಗೆ ನೀರು ನಿಲ್ಲದಂತೆ ಸುಲಭವಾಗಿ ಹೊರಹೋಗಲು ಈ ವ್ಯವಸ್ಥೆ ಮಾಡಲಾಗಿತ್ತು. ಮತ್ತೊಂದು ದೇವಸ್ಥಾನದ ಗರ್ಭಗುಡಿಯಿಂದ ವಿಗ್ರಹಗಳ ಅಭಿಷೇಕದ ಪವಿತ್ರ ನೀರನ್ನು ದೇವಸ್ಥಾನದ ಹೊರಭಾಗದ ಆವರಣಕ್ಕೆ ವ್ಯವಸ್ಥಿತವಾಗಿ ಸಾಗಿಸಲು ಇದನ್ನು ಬಳಸಲಾಗುತ್ತಿತ್ತು ಎಂದು ತಿಳಿಸಿದ್ದಾರೆ.
ವಿಜಯನಗರ ಕಾಲದ ಎಂಜಿನಿಯರಿಂಗ್ ಅದ್ಭುತ:
ನುಣ್ಣಗೆ ಕೆತ್ತಿದ ಗಟ್ಟಿಮುಟ್ಟಾದ ಗ್ರಾನೈಟ್ ಕಲ್ಲುಗಳನ್ನು ಬಳಸಿ ಈ ಚರಂಡಿ ಜಾಲವನ್ನು ನಿರ್ಮಿಸಲಾಗಿದೆ. ಇದು ವಿಜಯನಗರದ ಶಿಲ್ಪಿಗಳು ಮತ್ತು ವಾಸ್ತುಶಿಲ್ಪಿಗಳು ಹೊಂದಿದ್ದ ಅದ್ಭುತ ಎಂಜಿನಿಯರಿಂಗ್ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಶತಶತಮಾನಗಳಿಂದ ಮಣ್ಣು ಮತ್ತು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದ ಈ ಅಪರೂಪದ ರಚನೆಯು ಈಗ ASI ನಡೆಸುತ್ತಿರುವ ನಿರಂತರ ವೈಜ್ಞಾನಿಕ ಸ್ವಚ್ಛತಾ ಕಾರ್ಯದಿಂದಾಗಿ ಇತಿಹಾಸದ ಪುಟಗಳಿಂದ ಹೊರಬಂದಿದೆ.
ಇತಿಹಾಸದ ಹೊಸ ಅಧ್ಯಾಯಕ್ಕೆ ನಾಂದಿ:
ಮಧ್ಯಕಾಲೀನ ದಕ್ಷಿಣ ಭಾರತದ ದೇವಸ್ಥಾನಗಳಲ್ಲಿ ಧಾರ್ಮಿಕ ಆಚರಣೆಗಳು ಹೇಗೆ ನಡೆಯುತ್ತಿದ್ದವು, ನೀರಾವರಿ ಅಥವಾ ನೀರಿನ ಚಲನೆ ಹೇಗೆ ಇರುತ್ತಿತ್ತು ಮತ್ತು ಅಂದಿನ ವಾಸ್ತುಶಿಲ್ಪದ ಯೋಜನೆ ಎಂತಹದ್ದಾಗಿತ್ತು ಎಂಬುದರ ಕುರಿತು ಹೊಸ ಒಳನೋಟಗಳನ್ನು ನೀಡಲು ಈ ಸಂಶೋಧನೆ ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಕಾರ್ಯದರ್ಶಿ ಹಾಗೂ ಸ್ಥಳೀಯ ಗೈಡ್ ವಿರೂಪಾಕ್ಷಿ ವಿ. ಹಂಪಿ ಮಾತನಾಡಿ, ಹಜಾರ ರಾಮ ದೇವಸ್ಥಾನದ ಆವರಣದಲ್ಲಿ ಸತತವಾಗಿ ಪತ್ತೆಯಾಗುತ್ತಿರುವ ಆಳ್ವಾರ್ ಮೂರ್ತಿಗಳು, ಜೈನ ಅವಶೇಷಗಳು ಮತ್ತು ಬೃಹತ್ ಒಳಚರಂಡಿ ವ್ಯವಸ್ಥೆಯು, ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಯುನೆಸ್ಕೋ ವಿಶ್ವ ಪರಂಪರೆ ತಾಣ ಹಂಪಿಯ ಪುರಾತತ್ವ ಪ್ರಾಮುಖ್ಯತೆಯನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಹೆಚ್ಚಿಸಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.



