September 10, 2026
Thursday, September 10, 2026
spot_img

ಏರೋಸ್ಪೇಸ್ ಕಾರ್ಖಾನೆಯಲ್ಲಿ ಭಾರೀ ಪ್ರಮಾಣದ ಗ್ಯಾಸ್ ಲೀಕ್: ಬರೋಬ್ಬರಿ 40 ಸಾವಿರ ಜನರ ತುರ್ತು ಸ್ಥಳಾಂತರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಗಾರ್ಡನ್ ಗ್ರೋವ್ ಪ್ರದೇಶದಲ್ಲಿ ಭಾರೀ ರಾಸಾಯನಿಕ ಸೋರಿಕೆ ಆತಂಕ ಸೃಷ್ಟಿಸಿದ್ದು, ಸಾವಿರಾರು ಜನರನ್ನು ತುರ್ತಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಏರೋಸ್ಪೇಸ್ ಪ್ಲಾಸ್ಟಿಕ್ ಉತ್ಪಾದನಾ ಘಟಕದಲ್ಲಿದ್ದ ದೊಡ್ಡ ರಾಸಾಯನಿಕ ಟ್ಯಾಂಕ್‌ನಿಂದ ವಿಷಕಾರಿ ಅನಿಲ ಹೊರಬರುತ್ತಿರುವ ಹಿನ್ನೆಲೆ ಅಧಿಕಾರಿಗಳು ಹೈಅಲರ್ಟ್ ಘೋಷಿಸಿದ್ದಾರೆ.

ಟ್ಯಾಂಕ್ ಸ್ಫೋಟದ ಭೀತಿ

ಅಧಿಕಾರಿಗಳ ಪ್ರಕಾರ, ಟ್ಯಾಂಕ್‌ನಲ್ಲಿ ಸಂಗ್ರಹಿಸಿದ್ದ ಸುಮಾರು 22 ಸಾವಿರ ಲೀಟರ್‌ಗಿಂತ ಹೆಚ್ಚು ಮೀಥೈಲ್ ಮೆಥಾಕ್ರಿಲೇಟ್ ನಿಧಾನವಾಗಿ ಆವಿಯಾಗಿ ಗಾಳಿಯಲ್ಲಿ ಬೆರೆಯುತ್ತಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪ್ರಯತ್ನ ನಡೆದರೂ ಸೋರಿಕೆ ನಿಲ್ಲಿಸಲು ಸಾಧ್ಯವಾಗಿಲ್ಲ. ಟ್ಯಾಂಕ್ ಯಾವುದೇ ಕ್ಷಣದಲ್ಲಿ ವಿಫಲವಾಗುವ ಅಥವಾ ಸ್ಫೋಟಗೊಳ್ಳುವ ಸಾಧ್ಯತೆ ಇರುವುದಾಗಿ ತಜ್ಞರು ಎಚ್ಚರಿಸಿದ್ದಾರೆ.

ಸಾವಿರಾರು ಜನರ ಸ್ಥಳಾಂತರ

ಭದ್ರತಾ ಕ್ರಮವಾಗಿ ಸುಮಾರು 40 ಸಾವಿರ ನಿವಾಸಿಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗುತ್ತಿದೆ. ಪ್ರದೇಶದ 12ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲಾಗಿದ್ದು, ಜನರಿಗೆ ಮನೆಗಳಿಂದ ಹೊರಬರದಂತೆ ಸೂಚನೆ ನೀಡಲಾಗಿದೆ. ಆರಂಭದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿ ಸ್ಥಳಾಂತರ ಆದೇಶ ಹಿಂಪಡೆಯಲಾಗಿತ್ತು. ಆದರೆ ಗ್ಯಾಸ್ ಸೋರಿಕೆ ಮತ್ತೆ ಹೆಚ್ಚಾದ ಹಿನ್ನೆಲೆಯಲ್ಲಿ ಹೊಸದಾಗಿ ಎಚ್ಚರಿಕೆ ಜಾರಿಗೊಳಿಸಲಾಗಿದೆ.

ಇದನ್ನೂ ಓದಿ:

ತುರ್ತು ಕಾರ್ಯಾಚರಣೆ ಮುಂದುವರಿಕೆ

ಅಗ್ನಿಶಾಮಕ ದಳ, ವೈದ್ಯಕೀಯ ಸಿಬ್ಬಂದಿ ಹಾಗೂ ರಾಸಾಯನಿಕ ತಜ್ಞರು ಸ್ಥಳದಲ್ಲೇ ತಂಗಿದ್ದು ಪರಿಸ್ಥಿತಿಯನ್ನು ನಿಗಾ ವಹಿಸುತ್ತಿದ್ದಾರೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ಪರೀಕ್ಷೆ ನಡೆಸಲಾಗುತ್ತಿದ್ದು, ಜನರ ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !