October 16, 2026
Friday, October 16, 2026
spot_img

ಕ್ವೆಟ್ಟಾ ರೈಲ್ವೆ ಸ್ಟೇಷನ್ ನಲ್ಲಿ ಹರಿದ ರಕ್ತದೋಕುಳಿ: ಆತ್ಮಾಹುತಿ ಸ್ಫೋಟಕ್ಕೆ 24 ಬಲಿ, ನೂರಕ್ಕೂ ಹೆಚ್ಚು ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯ ಮತ್ತೆ ಭೀಕರ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಕ್ವೆಟ್ಟಾ ರೈಲ್ವೆ ನಿಲ್ದಾಣದ ಬಳಿ ನಡೆದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 24 ಮಂದಿ ಮೃತಪಟ್ಟಿದ್ದು, ನೂರಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಸ್ಫೋಟದ ತೀವ್ರತೆಗೆ ರೈಲು ಬೋಗಿಗಳು ಹಳಿ ತಪ್ಪಿ, ಪ್ರದೇಶವೇ ಯುದ್ಧಭೂಮಿಯಂತಾಗಿದೆ.

ರೈಲನ್ನೇ ಗುರಿಯಾಗಿಸಿಕೊಂಡ ದಾಳಿ

ಕ್ಯಾಂಟ್ ಭಾಗದತ್ತ ತೆರಳುತ್ತಿದ್ದ ಪ್ರಯಾಣಿಕರ ರೈಲಿನ ಸಮೀಪ ಸ್ಫೋಟ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ವಾಹನದ ಮೂಲಕ ದಾಳಿ ನಡೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಸ್ಫೋಟದ ಬಳಿಕ ಸ್ಥಳದಲ್ಲಿ ಭಾರೀ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದೆ. ಕೆಲವೆಡೆ ಗುಂಡಿನ ಸದ್ದುಗಳೂ ಕೇಳಿಬಂದಿರುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:

ರಕ್ಷಣಾ ಕಾರ್ಯಾಚರಣೆ ತೀವ್ರ

ಸ್ಫೋಟದ ತಕ್ಷಣ ಭದ್ರತಾ ಪಡೆಗಳು ಮತ್ತು ಆಂಬುಲೆನ್ಸ್ ತಂಡಗಳು ಸ್ಥಳಕ್ಕೆ ಧಾವಿಸಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಪ್ರದೇಶವನ್ನು ಸಂಪೂರ್ಣ ಭದ್ರತಾ ವಲಯವನ್ನಾಗಿ ಘೋಷಿಸಿ ಶೋಧ ಕಾರ್ಯ ಮುಂದುವರಿಸಲಾಗಿದೆ.

ಬಲೂಚಿಸ್ತಾನದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ

ಇತ್ತೀಚಿನ ವಾರಗಳಲ್ಲಿ ಬಲೂಚಿಸ್ತಾನದಲ್ಲಿ ಶಸ್ತ್ರಸಜ್ಜಿತ ದಾಳಿಗಳು, ರಸ್ತೆ ತಡೆಗಳು ಹಾಗೂ ಸೇನಾ ವಾಹನಗಳ ಮೇಲೆ ದಾಳಿಗಳು ಹೆಚ್ಚಾಗಿವೆ. ಕೆಲವು ಪ್ರದೇಶಗಳಲ್ಲಿ ಶಸ್ತ್ರಸಜ್ಜಿತ ಗುಂಪುಗಳು ತಾತ್ಕಾಲಿಕ ನಿಯಂತ್ರಣ ಸಾಧಿಸಿದ್ದರೆಂಬ ವರದಿಗಳೂ ಹೊರಬಿದ್ದಿವೆ. ಈ ಬೆಳವಣಿಗೆಗಳು ಪಾಕಿಸ್ತಾನದ ಭದ್ರತಾ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ.

Must Read