May 24, 2026
Sunday, May 24, 2026
spot_img

Travel | ಮೋಡಗಳ ನಾಡಿಗೆ ಲಾಂಗ್ ಡ್ರೈವ್: ಮಳೆಗಾಲದ ಮಜಾ ಸವಿಯಲು ಇಲ್ಲಿದೆ ಕರ್ನಾಟಕದ ‘ಮಾನ್ಸೂನ್ ಸ್ಪಾಟ್ಸ್’

ಕರ್ನಾಟಕದಲ್ಲಿ ಮಳೆಗಾಲದ ಆರಂಭವಾಗುತ್ತಿದ್ದಂತೆಯೇ ಇಡೀ ರಾಜ್ಯವು ಪ್ರಕೃತಿಯ ಮಡಿಲಾಗಿ ಬದಲಾಗುತ್ತದೆ. ಧುಮ್ಮಿಕ್ಕುವ ಜಲಪಾತಗಳ ಗರ್ಜನೆ, ಮಂಜಿನ ಮುಸುಕಿನಿಂದ ಆವೃತವಾದ ಪಶ್ಚಿಮ ಘಟ್ಟಗಳ ಬೆಟ್ಟಗುಡ್ಡಗಳು ಮತ್ತು ಕಣ್ಣು ಹಾಯಿಸಿದಷ್ಟೂ ಹಸಿರಿನ ರಂಗು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇಂದಿನ ಧಾವಂತದ ಜಂಜಾಟದ ಬದುಕಿನಿಂದ ದೂರ ಸರಿದು, ಮಳೆಯ ಹನಿಗಳ ಜೊತೆ ಪ್ರಕೃತಿಯ ರಮಣೀಯ ಸೌಂದರ್ಯವನ್ನು ಆಸ್ವಾದಿಸಲು ಮಳೆಗಾಲವೇ ಅತ್ಯಂತ ಸೂಕ್ತವಾದ ಸಮಯವಾಗಿದೆ. ಕರ್ನಾಟಕದಲ್ಲಿ ಮಳೆಯ ದಿನಗಳನ್ನು ಸವಿಯಲು ಮತ್ತು ರೋಮ್ಯಾಂಟಿಕ್ ಲಾಂಗ್ ಡ್ರೈವ್ ಹೋಗಲು ಯೋಗ್ಯವಾದ ಅತ್ಯುತ್ತಮ ಗಿರಿಧಾಮಗಳು ಮತ್ತು ಜಲಪಾತಗಳ ತಾಣಗಳ ಬಗ್ಗೆ ತಿಳಿಯೋಣ.

ಮಳೆಗಾಲದಲ್ಲಿ ಭೇಟಿ ನೀಡಲೇಬೇಕಾದ ಕರ್ನಾಟಕದ ಅತ್ಯುತ್ತಮ ಪ್ರವಾಸಿ ಸ್ಥಳಗಳು:

ಮಡಿಕೇರಿ ಮತ್ತು ಕೊಡಗು

ಕೊಡಗನ್ನು ‘ಭಾರತದ ಸ್ಕಾಟ್‌ಲ್ಯಾಂಡ್’ ಎಂದು ಕರೆಯಲಾಗುತ್ತದೆ. ಮಳೆಗಾಲದಲ್ಲಿ ಇಲ್ಲಿನ ಕಾಫಿ ತೋಟಗಳು, ಮಂಜಿನ ವಾತಾವರಣ ಮತ್ತು ತಂಪಾದ ಗಾಳಿ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಇಲ್ಲಿ ಅಬ್ಬಿ ಜಲಪಾತ, ರಾಜಾ ಸೀಟ್, ಮಾಂದಲಪಟ್ಟಿ ಬೆಟ್ಟ ಮತ್ತು ಕಾವೇರಿ ನದಿಯ ಉಗಮಸ್ಥಾನವಾದ ತಲಕಾವೇರಿ ನೋಡಲೇಬೇಕಾದ ಸ್ಥಳಗಳಾಗಿದ್ದು, ಇಲ್ಲಿಗೆ ಪ್ರಕೃತಿ ಪ್ರೇಮಿಗಳು ಮತ್ತು ರೋಮ್ಯಾಂಟಿಕ್ ಲಾಂಗ್ ಡ್ರೈವ್ ಇಷ್ಟಪಡುವವರು ಹೋಗಬಹುದು.

ಚಿಕ್ಕಮಗಳೂರು

ಕರ್ನಾಟಕದ ಅತ್ಯಂತ ಪ್ರಸಿದ್ಧ ಗಿರಿಧಾಮಗಳಲ್ಲಿ ಒಂದಾದ ಚಿಕ್ಕಮಗಳೂರು ಮಳೆಗಾಲದಲ್ಲಿ ಮೋಡಗಳ ನಾಡಾಗಿ ಬದಲಾಗುತ್ತದೆ. ಇಲ್ಲಿನ ಘಾಟ್ ರಸ್ತೆಗಳಲ್ಲಿ ಪ್ರಯಾಣಿಸುವುದೇ ಒಂದು ಅದ್ಭುತ ಅನುಭವ. ಇಲ್ಲಿ ಮುಳ್ಳಯ್ಯನಗಿರಿ (ಕರ್ನಾಟಕದ ಅತಿ ಎತ್ತರದ ಶಿಖರ), ಬಾಬಾಬುಡನ್‌ಗಿರಿ, ಹೆಬ್ಬೆ ಜಲಪಾತ ಮತ್ತು ಜಡ್ಜ್‌ಮೆಂಟ್ ವ್ಯಾಲಿ ನೋಡಲೇಬೇಕಾದ ಸ್ಥಳಗಳಾಗಿವೆ. ಕಾಫಿ ತೋಟಗಳ ಮಧ್ಯೆ ಇರುವ ಹೋಂಸ್ಟೇಗಳಲ್ಲಿ ತಂಗಿ ಬಿಸಿ ಬಿಸಿಯಾದ ತಾಜಾ ಕಾಫಿ ಕುಡಿಯುವುದು.

ಆಗುಂಬೆ ಮತ್ತು ತೀರ್ಥಹಳ್ಳಿ

ಆಗುಂಬೆಯನ್ನು ‘ದಕ್ಷಿಣ ಭಾರತದ ಚಿರಾಪುಂಜಿ’ ಎಂದು ಕರೆಯಲಾಗುತ್ತದೆ. ದಟ್ಟವಾದ ಕಾಡುಗಳು ಮತ್ತು ಸದಾ ಸುರಿಯುವ ಮಳೆಗೆ ಇದು ಪ್ರಸಿದ್ಧ. ಜೋಗಿಗುಂಡಿ ಜಲಪಾತ, ಒನಕೆ ಅಬ್ಬಿ ಜಲಪಾತ, ಕುಂದಾದ್ರಿ ಬೆಟ್ಟ ಮತ್ತು ಆಗುಂಬೆ ಸನ್‌ಸೆಟ್ ನೋಡಬಹುದು. ಚಾರಣಿಗರು (Trekking) ಮತ್ತು ವನ್ಯಜೀವಿ ಛಾಯಾಗ್ರಾಹಕರು ಇಲ್ಲಿ ಹೆಚ್ಚಾಗಿ ಹೋಗುತ್ತಾರೆ.

ಜೋಗ ಜಲಪಾತ ಮತ್ತು ಶಿರಸಿ

ಭಾರತದ ಅತ್ಯಂತ ಎತ್ತರದ ನೇರ ಜಲಪಾತಗಳಲ್ಲಿ ಒಂದಾದ ಜೋಗ ಜಲಪಾತವನ್ನು ಮಳೆಗಾಲದಲ್ಲೇ ನೋಡಬೇಕು. ಶರಾವತಿ ನದಿಯು ಭೋರ್ಗರೆಯುತ್ತಾ ಧುಮ್ಮಿಕ್ಕುವ ದೃಶ್ಯ ಕಣ್ಣಿಗೆ ಹಬ್ಬ ನೀಡುತ್ತದೆ. ಜೋಗ ಜಲಪಾತ, ಶಿರಸಿಯ ಸಹಸ್ರಲಿಂಗ, ಮತ್ತು ಯಾಣದ ವಿಶಿಷ್ಟ ಕಲ್ಲಿನ ರಚನೆಗಳು ಇಲ್ಲಿ ಕಾಣಬುಹುದು.

ಗೋಕರ್ಣ ಮತ್ತು ಮುರುಡೇಶ್ವರ

ಮಳೆಗಾಲದಲ್ಲಿ ಸಮುದ್ರದ ಅಲೆಗಳ ಆರ್ಭಟ ಮತ್ತು ಕರಾವಳಿಯ ಹಸಿರನ್ನು ನೋಡಲು ಇಷ್ಟಪಡುವವರಿಗೆ ಇದು ಬೆಸ್ಟ್ ಚಾಯ್ಸ್. ಗೋಕರ್ಣದ ಓಂ ಬೀಚ್, ಹಾಫ್ ಮೂನ್ ಬೀಚ್ ಮತ್ತು ಮುರುಡೇಶ್ವರದ ಬೃಹತ್ ಶಿವನ ಮೂರ್ತಿ ಹಾಗೂ ಸಮುದ್ರದ ಮಧ್ಯೆ ಇರುವ ದೇವಸ್ಥಾನಕ್ಕೆ ಭೇಟಿ ನೀಡಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !