ಹೊಸದಿಗಂತ ವರದಿ ಬೆಳಗಾವಿ:
ಮೇ 28 ರಂದು ಬಕ್ರೀದ್ ಹಬ್ಬದದಂದು ರಾಜ್ಯದಲ್ಲಿ ಅಕ್ರಮ ಗೋ ಸಾಗಾಟ ಹಾಗೂ ಗೋಹತ್ಯೆಯನ್ನು ಕಟ್ಟುನಿಟ್ಟಾಗಿ ತಡೆಯಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಹಾಗೂ ಬಕ್ರೀದ್ ಹಬ್ಬದ ವೇಳೆ ಕುರಬಾನಿ ಹೆಸರಿನಲ್ಲಿ ನಡೆಯುವ ಅಕ್ರಮ ಗೋವಧೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಸಂಘಟನೆಗಳು ಒತ್ತಾಯಿಸಿವೆ.
ನಗರದಲ್ಲಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಬಳಿಕ ಪ್ರತಿಭಟನಾ ರ್ಯಾಲಿ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿದ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಭಾಗವಹಿಸಿ, ಗೋ ರಕ್ಷಣೆಗೆ ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುವುದರ ಮೂಲಕ ಜಿಲ್ಲಾಧಿಕಾರಿಗಳ ಮೂಲಕ ರಝೈ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
‘ಗೋಹತ್ಯೆ ತಡೆಯಲು ಸರ್ಕಾರ ಮುಂದಾಗಲಿ’
ಪ್ರತಿಭಟನೆಯ ಉದ್ದೇಶಿಸಿ ಮಾತನಾಡಿದ ಮುಪ್ಪಿನ ಶ್ರೀ ಕಾಡಸಿದ್ದೇಶ್ವರ ಸ್ವಾಮಿಜೀ, ಅವರು, “ಕರ್ನಾಟಕದಲ್ಲಿ ಮೇ 28 ರಂದು ಮುಸ್ಲಿಂ ಸಮುದಾಯದ ಬಕ್ರೀದ್ ಹಬ್ಬದ ನಿಮಿತ್ತ ನಡೆಯುವ ಗೋಹತ್ಯೆಯನ್ನು ಸಂಪೂರ್ಣವಾಗಿ ತಡೆಯುವ ಕೆಲಸ ಸರ್ಕಾರ ಮಾಡಬೇಕು. ಗೋವುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸುವ ಜೊತೆಗೆ ಗೋ ರಕ್ಷಣೆಗೆ ಆದ್ಯತೆ ನೀಡಬೇಕು,” ಎಂದು ಹೇಳಿದರು.
ಜಿಲ್ಲೆಯಲ್ಲಿ ಸರ್ಕಾರದ ಆದೇಶಗಳಿದ್ದರೂ ಅಕ್ರಮ ಗೋ ಸಾಗಾಟ ಮತ್ತು ಗೋಹತ್ಯೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ ಎಂದು ಆರೋಪಿಸಿದ ಅವರು, “ಹಿಂದೂ ಸಂಪ್ರದಾಯದಲ್ಲಿ ಗೋವನ್ನು ಪೂಜನೀಯವಾಗಿ ಕಾಣಲಾಗುತ್ತದೆ. ಗೋಹತ್ಯೆಯಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತಿದೆ. ಆದ್ದರಿಂದ ಮೇ 29ರವರೆಗೆ ಜಾನುವಾರು ಸಂತೆ ಹಾಗೂ ಗೋ ಮಾರಾಟವನ್ನು ನಿಷೇಧಿಸಬೇಕು. ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಖೆಯಿಂದ ಚೆಕ್ ಪೋಸ್ಟ್ ಸ್ಥಾಪಿಸಿ ಪರಿಶೀಲನಾ ತಂಡಗಳನ್ನು ನಿಯೋಜಿಸಬೇಕು,” ಎಂದು ಒತ್ತಾಯಿಸಿದರು.
‘ಗೋ ರಕ್ಷಣೆ ದೇಶದ ಅಗತ್ಯ’
ಇದೇ ವೇಳೆ ಆರ್ಎಸ್ಎಸ್ ನ ಪ್ರಮುಖರು ಕೃಷ್ಣಾ ಭಟ್, ಅವರು ಮಾತನಾಡಿ, “ದೇಶದಾದ್ಯಂತ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕುರಬಾನಿ ಹೆಸರಿನಲ್ಲಿ ಗೋವಧೆ ನಡೆಯದಂತೆ ತಡೆಯುವ ಉದ್ದೇಶದಿಂದ ಪ್ರತಿಭಟನೆ ಮತ್ತು ಮನವಿ ಅಭಿಯಾನ ನಡೆಯುತ್ತಿದೆ. ಭಾರತವು ಗೋ ಆಧಾರಿತ ಕೃಷಿ ಪ್ರಧಾನ ದೇಶವಾಗಿದೆ. ಹಾಲು ಉತ್ಪಾದನೆ ಸೇರಿದಂತೆ ಗ್ರಾಮೀಣ ಆರ್ಥಿಕತೆಯಲ್ಲಿ ಗೋವಿನ ಪಾತ್ರ ಮಹತ್ವದ್ದಾಗಿದೆ,” ಎಂದು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಗೋವಿನ ಸಂತತಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಮಧ್ಯ ಪ್ರದೇಶ, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಗೋವಂಶ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಉತ್ತರ ಪ್ರದೇಶದ ಮುಸ್ಲಿಂ ಸಂಘಟನೆಗಳ ಕೆಲ ಮುಖಂಡರೂ ಗೋ ರಕ್ಷಣೆಗೆ ಬೆಂಬಲ ವ್ಯಕ್ತಪಡಿಸಿರುವುದು ಗಮನಾರ್ಹ, ಎಂದು ಅವರು ತಿಳಿಸಿದರು.
ಇದನ್ನೂ ಓದಿ:
ಅಲ್ಲದೆ, “ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂಬ ಬೇಡಿಕೆ ದೇಶದ ವಿವಿಧ ವಲಯಗಳಿಂದ ಕೇಳಿಬರುತ್ತಿದೆ. ಕೇವಲ ಹೇಳಿಕೆಗಳ ಮಟ್ಟದಲ್ಲಿ ಅಲ್ಲದೆ, ಗೋಹತ್ಯೆ ಸಂಪೂರ್ಣ ತಡೆಗೆ ಸರ್ಕಾರ ಕಾನೂನುಬದ್ಧ ಹಾಗೂ ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು.
ಈ ವೇಳೆ ವಿಜಯ್ ಜಾಧವ್, ಎ.ಎನ್. ಕರಲಿಂಗಣ್ಣವರ, ಡಾ. ಸುಭಾಷ್ ಪಾಟೀಲ್, ಶ್ರೀದೇವಿ ಬುಡವಿ, ಆನಂದ ಕರಲಿಂಗಣ್ಣವರ, ಭಾವಕಣ್ಣಾ ಲೋಹಾರ್, ಸುನೀಲ್, ಕಿರಣ್ ಕಿಲ್ಲೇಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.



