ಹೊಸದಿಗಂತ ವರದಿ ಕುಶಾಲನಗರ::
ದೆಹಲಿಯಲ್ಲಿ ನಡೆದ ಬುಡಕಟ್ಟು ಸಮಾವೇಶಕ್ಕೆ ತೆರಳಿದ್ದ ಕೊಡಗಿನ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವಿಗೀಡಾದ ಘಟನೆ ನಡೆದಿದೆ.
ಇಲ್ಲಿಗೆ ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದ ಮತ್ತಾರಿ ಭೋಜಪ್ಪ ಎಂಬವರ ಪುತ್ರ ಮಾತ್ತಾರಿ ಹರ್ಷ (37) ಸಾವಿಗೀಡಾದವರು.
ದೆಹಲಿಯ ಬುಡಕಟ್ಟು ಸಮಾವೇಶಕ್ಕೆ ಕೊಡಗಿನ ನೂರಕ್ಕೂ ಅಧಿಕ ಪ್ರತಿನಿಧಿಗಳು ತೆರಳಿದ್ದು, ಕಾರ್ಯಕ್ರಮ ಮುಗಿಸಿ ಬರುವಾಗ ಮಧ್ಯಪ್ರದೇಶದ ಇಂಧೋರ್ ರೈಲು ನಿಲ್ದಾಣದಲ್ಲಿ ಎದೆ ನೋವು ಕಾಣಿಸಿಕೊಂಡಿದೆ.
ಇದನ್ನೂ ಓದಿ:
ನೋವಿನಿಂದ ನರಳುತ್ತಿದ್ದ ಹರ್ಷ ಅವರನ್ನು ಜೊತೆಯಲ್ಲಿದ್ದವರು ರೈಲ್ವೇ ನಿಲ್ದಾಣದ ವೈದ್ಯಾಧಿಕಾರಿಯವರ ಬಳಿ ತಪಾಸಣೆ ಮಾಡಿಸುವಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಮೃತರು ಪತ್ನಿ ಮತ್ತು ಒಂದು ಮಗುವನ್ನು ಅಗಲಿದ್ದು, ಅಂತ್ಯಕ್ರಿಯೆ ದೊಡ್ಡತ್ತೂರು ಗ್ರಾಮದಲ್ಲಿ ಬುಧವಾರ ನಡೆಯಲಿದೆ.



