ಮಕ್ಕಳು ಹೊಸ ಶಾಲೆಗೆ ಸೇರಿದಾಗ ಅಥವಾ ದೀರ್ಘ ಬೇಸಿಗೆ ರಜೆಯ ನಂತರ ಹೊಸ ತರಗತಿಗಳಿಗೆ ಹೆಜ್ಜೆ ಇಡುವಾಗ ಅವರ ಮನಸ್ಸಿನಲ್ಲಿ ಒಂದು ರೀತಿಯ ಆತಂಕ ಮತ್ತು ಹಿಂಜರಿಕೆ ಇರುವುದು ಸಹಜ. ಅಪರಿಚಿತ ವಾತಾವರಣ, ಹೊಸ ಶಿಕ್ಷಕರು ಹಾಗೂ ಹೊಸ ಸ್ನೇಹಿತರ ನಡುವೆ ಮಗು ಕಳೆದುಹೋದಂತೆ ಅನುಭವಿಸಬಹುದು. ಇಂತಹ ಸಂದರ್ಭದಲ್ಲಿ ಮಗು ಧೈರ್ಯವಾಗಿ ಹೊಸ ಬದಲಾವಣೆಯನ್ನು ಸ್ವೀಕರಿಸಲು ಪೋಷಕರ ಬೆಂಬಲ ಅತ್ಯಂತ ಮುಖ್ಯವಾಗಿರುತ್ತದೆ.
ಮಗು ಹೊಸ ವಾತಾವರಣಕ್ಕೆ ಬೇಗನೆ ಹೊಂದಿಕೊಳ್ಳಲು ಪೋಷಕರು ಮಾಡಬೇಕಾದ ಪ್ರಮುಖ ಸಿದ್ಧತೆಗಳು..
ಮುಕ್ತವಾಗಿ ಮಾತನಾಡಿ, ಧೈರ್ಯ ತುಂಬಿ
ಶಾಲೆ ಆರಂಭವಾಗುವ ಕೆಲವು ದಿನಗಳ ಮುಂಚಿನಿಂದಲೇ ಹೊಸ ಶಾಲೆಯ ಬಗ್ಗೆ ಮಕ್ಕಳೊಂದಿಗೆ ಸಕಾರಾತ್ಮಕವಾಗಿ ಮಾತನಾಡಿ. ಅಲ್ಲಿ ಸಿಗುವ ಹೊಸ ಸ್ನೇಹಿತರು, ಆಟದ ಮೈದಾನ ಮತ್ತು ಹೊಸ ವಿಷಯಗಳ ಬಗ್ಗೆ ತಿಳಿಸಿ ಅವರಲ್ಲಿ ಕುತೂಹಲ ಮೂಡಿಸಿ. ಹೊಸ ಜಾಗದ ಬಗ್ಗೆ ಅವರಿಗಿರುವ ಭಯ ಅಥವಾ ಆತಂಕವನ್ನು ಮುಚ್ಚಿಡದೆ ಹೊರಹಾಕಲು ಅವಕಾಶ ಕೊಡಿ. ನಾನು ನಿನ್ನೊಂದಿಗಿದ್ದೇನೆ ಎಂಬ ಭರವಸೆ ಮಗುವಿಗೆ ಮಾನಸಿಕ ಧೈರ್ಯ ನೀಡುತ್ತದೆ.
ಶಾಲೆಗೆ ಮುಂಚಿತವಾಗಿ ಭೇಟಿ ನೀಡಿ
ಸಾಧ್ಯವಾದರೆ, ಶಾಲೆ ಆರಂಭವಾಗುವ ಮುನ್ನವೇ ಮಗುವನ್ನು ಒಮ್ಮೆ ಶಾಲಾ ಆವರಣಕ್ಕೆ ಕರೆದುಕೊಂಡು ಹೋಗಿ. ಅವರ ತರಗತಿ ಕೊಠಡಿ, ಶೌಚಾಲಯ ಮತ್ತು ಆಟದ ಮೈದಾನವನ್ನು ತೋರಿಸಿ. ವಾತಾವರಣ ಮೊದಲೇ ಪರಿಚಯವಿದ್ದರೆ, ಶಾಲೆಯ ಮೊದಲ ದಿನ ಅವರಿಗೆ ಅದು ಅಪರಿಚಿತ ಜಾಗ ಎಂದು ಅನಿಸುವುದಿಲ್ಲ.
ದಿನಚರಿಯನ್ನು ಮುಂಚಿತವಾಗಿಯೇ ಬದಲಾಯಿಸಿ
ರಜೆಯ ದಿನಗಳಲ್ಲಿ ಮಕ್ಕಳು ತಡವಾಗಿ ಮಲಗಿ, ತಡವಾಗಿ ಏಳುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಶಾಲೆ ಆರಂಭವಾಗುವ ಕನಿಷ್ಠ ಒಂದು ವಾರ ಮುಂಚಿತವಾಗಿಯೇ ಶಾಲೆಯ ಸಮಯಕ್ಕೆ ತಕ್ಕಂತೆ ಬೆಳಿಗ್ಗೆ ಬೇಗ ಏಳುವುದು, ರಾತ್ರಿ ಸಮಯಕ್ಕೆ ಸರಿಯಾಗಿ ಮಲಗುವ ಅಭ್ಯಾಸವನ್ನು ಮರುಸ್ಥಾಪಿಸಿ. ಇದರಿಂದ ಶಾಲೆಯ ಮೊದಲ ದಿನಗಳಲ್ಲಿ ಮಕ್ಕಳು ದೈಹಿಕವಾಗಿ ಸುಸ್ತಾಗುವುದು ತಪ್ಪುತ್ತದೆ.
ಶಾಲಾ ಶಾಪಿಂಗ್‌ನಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಿ
ಹೊಸ ಬ್ಯಾಗ್, ಬಾಟಲಿ, ಟಿಫಿನ್ ಬಾಕ್ಸ್ ಅಥವಾ ಸ್ಟೇಷನರಿ ವಸ್ತುಗಳನ್ನು ಖರೀದಿಸುವಾಗ ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೋಗಿ. ಅವರ ಇಷ್ಟದ ಬಣ್ಣ ಅಥವಾ ಕಾರ್ಟೂನ್ ಪಾತ್ರಗಳಿರುವ ವಸ್ತುಗಳನ್ನು ಅವರೇ ಆಯ್ಕೆ ಮಾಡಲು ಬಿಡಿ. ಇದು ಅವರಿಗೆ ಶಾಲೆಯ ಮೊದಲ ದಿನ ಆ ವಸ್ತುಗಳನ್ನು ಬಳಸಲು ಹೊಸ ಉತ್ಸಾಹವನ್ನು ನೀಡುತ್ತದೆ.
ಶಾಂತವಾಗಿರಿ ಮತ್ತು ಸಮಯ ನೀಡಿ
ಪ್ರತಿಯೊಂದು ಮಗುವಿನ ಸ್ವಭಾವ ವಿಭಿನ್ನವಾಗಿರುತ್ತದೆ. ಕೆಲವು ಮಕ್ಕಳು ಒಂದೇ ದಿನದಲ್ಲಿ ಹೊಸ ವಾತಾವರಣಕ್ಕೆ ಹೊಂದಿಕೊಂಡರೆ, ಇನ್ನು ಕೆಲವು ಮಕ್ಕಳಿಗೆ ವಾರಗಳು ಬೇಕಾಗಬಹುದು. ಮಗು ಆರಂಭದಲ್ಲಿ ಶಾಲೆಗೆ ಹೋಗಲು ಹಠ ಮಾಡಿದರೆ ಕೋಪಗೊಳ್ಳಬೇಡಿ, ಹೊಡೆಯಬೇಡಿ ಅಥವಾ ಇತರ ಮಕ್ಕಳೊಂದಿಗೆ ಹೋಲಿಸಬೇಡಿ. ಅವರ ಬದಲಾವಣೆಗೆ ಪೂರಕವಾಗಿರಲು ಪೋಷಕರು ತಾಳ್ಮೆಯಿಂದ ಇರಬೇಕಾಗುತ್ತದೆ.



