ದಕ್ಷಿಣ ಕರ್ನಾಟಕದ ಸಾಂಪ್ರದಾಯಿಕ ಮತ್ತು ಹೆಮ್ಮೆಯ ಅಡುಗೆಗಳಲ್ಲಿ ‘ಬಿಸಿಬೇಳೆಬಾತ್’ ಪ್ರಮುಖವಾದದ್ದು. ಆದರೆ ತೂಕ ಇಳಿಸಿಕೊಳ್ಳಲು ಬಯಸುವವರು ಅಥವಾ ಮಧುಮೇಹ ಇರುವವರು ಅಕ್ಕಿಯ ಬಳಕೆಯಿಂದಾಗಿ ಇದನ್ನು ತಿನ್ನಲು ಯೋಚಿಸುತ್ತಾರೆ. ಅಂತಹವರಿಗಾಗಿ ಇಲ್ಲಿದೆ ಒಂದು ಅದ್ಭುತ ಮತ್ತು ಆರೋಗ್ಯಕರ ‘ಅವಲಕ್ಕಿ ಬಿಸಿಬೇಳೆಬಾತ್’ ರೆಸಿಪಿ.
ಬೇಕಾಗುವ ಸಾಮಗ್ರಿಗಳು
ದಪ್ಪ ಅವಲಕ್ಕಿ
ತೊಗರಿ ಬೇಳೆ
ಕ್ಯಾರೆಟ್
ಬೀನ್ಸ್
ಬಟಾಣಿ
ಆಲೂಗಡ್ಡೆ
ಬಿಸಿಬೇಳೆಬಾತ್ ಪುಡಿ
ಹುಣಿಸೇಹಣ್ಣಿನ ರಸ
ಬೆಲ್ಲದ ಪುಡಿ
ಗೋಡಂಬಿ
ಎಣ್ಣೆ ಅಥವಾ ತುಪ್ಪ
ಸಾಸಿವೆ
ಜೀರಿಗೆ
ಕರಿಬೇವು
ಇಂಗು
ಉಪ್ಪು
ಮಾಡುವ ವಿಧಾನ
ಮೊದಲು ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ನಲ್ಲಿ ಹಾಕಿ. ಅದರ ಜೊತೆಗೆ ಹೆಚ್ಚಿದ ತರಕಾರಿಗಳು, ಸ್ವಲ್ಪ ಅರಿಶಿನ ಮತ್ತು ನೀರು ಸೇರಿಸಿ 3 ವಿಸಲ್ ಬರುವವರೆಗೆ ಬೇಯಿಸಿಕೊಳ್ಳಬೇಕು.
ನಂತರ ದಪ್ಪ ಅವಲಕ್ಕಿಯನ್ನು ಒಂದೆರಡು ಬಾರಿ ನೀರಿನಲ್ಲಿ ತೊಳೆದು, ನೀರನ್ನು ಸಂಪೂರ್ಣವಾಗಿ ಸೋಸಿ 5 ನಿಮಿಷ ಪಕ್ಕಕ್ಕೆ ಇಡಬೇಕು. ಬಳಿಕ ಒಂದು ದೊಡ್ಡ ಪಾತ್ರೆಯಲ್ಲಿ ಬೇಯಿಸಿದ ಬೇಳೆ ಮತ್ತು ತರಕಾರಿ ಮಿಶ್ರಣವನ್ನು ಹಾಕಿ, ಅದಕ್ಕೆ ಬಿಸಿಬೇಳೆಬಾತ್ ಪುಡಿ, ಹುಣಿಸೇಹಣ್ಣಿನ ರಸ, ಬೆಲ್ಲ, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕುದಿಸಿದ ನಂತರ ನೆನೆಸಿಟ್ಟ ಅವಲಕ್ಕಿಯನ್ನು ಹಾಕಿ ಕೈಯಾಡಿಸಿ. ಬಳಿಕ ಸಣ್ಣ ಉರಿಯಲ್ಲಿ-4 ನಿಮಿಷ ಬೇಯಿಸಿ, ಅವಲಕ್ಕಿ ಎಲ್ಲಾ ಮಸಾಲೆಯನ್ನು ಹೀರಿಕೊಳ್ಳುವಂತೆ ಮಾಡಬೇಕು. ನಂತರ ಸಣ್ಣ ಬಾಣಲೆಯಲ್ಲಿ ತುಪ್ಪ ಕಾಯಿಸಿ ಸಾಸಿವೆ, ಜೀರಿಗೆ, ಇಂಗು, ಕರಿಬೇವು ಮತ್ತು ಗೋಡಂಬಿ ಹಾಕಿ ಹುರಿದುಕೊಂಡು ಸಿದ್ಧವಾದ ಅವಲಕ್ಕಿ ಬಿಸಿಬೇಳೆಬಾತ್‌ಗೆ ಸೇರಿಸಿ ಮಿಕ್ಸ್ ಮಾಡಿದರೆ ಬಿಸಿಬಿಸಿ ಅವಲಕ್ಕಿ ಬಿಸಿಬೇಳೆಬಾತ್ ಸವಿಯಲು ಸಿದ್ಧವಾಗುತ್ತದೆ.



