May 28, 2026
Thursday, May 28, 2026
spot_img

ದೆಹಲಿಯಲ್ಲಿ ನಿಗೂಢ ಸಾ*ವು: ಲಾಕ್ ಆಗಿದ್ದ ಮನೆಯೊಳಗೆ ಇಬ್ಬರು ವೃದ್ಧೆಯರ ಶ*ವ ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೆಹಲಿಯ ನ್ಯೂ ರಾಜಿಂದರ್ ನಗರದ ವಸತಿ ಗೃಹವೊಂದರಲ್ಲಿ ಇಬ್ಬರು ವೃದ್ಧೆಯರು ಶವವಾಗಿ ಪತ್ತೆಯಾಗಿದ್ದಾರೆ. ಇಡೀ ಮನೆಯ ಬಾಗಿಲುಗಳು ಒಳಗಿನಿಂದ ಲಾಕ್ ಆಗಿದ್ದು, ಯಾವುದೇ ವ್ಯಕ್ತಿ ಬಲವಂತವಾಗಿ ಒಳನುಗ್ಗಿದ ಅಥವಾ ಲೂಟಿ ಮಾಡಿದ ಲಕ್ಷಣಗಳು ಮೇಲ್ನೋಟಕ್ಕೆ ಕಂಡುಬಂದಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಸುಮಾರು 80 ವರ್ಷ ವಯಸ್ಸಿನ ಸರೋಜ ಬಾಲಾ ಮತ್ತು ಅವರ ನಾದಿನಿ ಚಂದ್ರಕಾಂತ ಎಂದು ಗುರುತಿಸಲಾಗಿದೆ.

ಮನೆಗೆಲಸದ ಮಹಿಳೆಗೆ ಸಿಕ್ಕಿತು ಸುಳಿವು

ಸರೋಜ ಬಾಲಾ ಅವಿವಾಹಿತರಾಗಿದ್ದು, ಕಳೆದ ಹಲವು ವರ್ಷಗಳಿಂದ ನಾದಿನಿ ಚಂದ್ರಕಾಂತರೊಂದಿಗೆ ಅದೇ ಮನೆಯಲ್ಲಿ ವಾಸಿಸುತ್ತಿದ್ದರು. ಗುರುವಾರ ಬೆಳಗ್ಗೆ 10.30 ರ ಸುಮಾರಿಗೆ ಮನೆಯ ಮುಂಭಾಗದ ಜಗಲಿಯನ್ನು ಸ್ವಚ್ಛಗೊಳಿಸಲು ಬಂದ ಕೆಲಸದಾಕೆಗೆ ಮನೆಯ ಒಳಗಿನಿಂದ ತೀವ್ರವಾದ ದುರ್ವಾಸನೆ ಬರಲಾರಂಭಿಸಿದೆ. ಅನುಮಾನಗೊಂಡು ಪರಿಶೀಲಿಸಿದಾಗ ಮನೆಯ ಎಲ್ಲಾ ಬಾಗಿಲುಗಳು ಒಳಗಿನಿಂದ ಲಾಕ್ ಆಗಿರುವುದು ಕಂಡುಬಂದಿದೆ. ತಕ್ಷಣವೇ ಆಕೆ ನೆರೆಹೊರೆಯವರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಇದನ್ನೂ ಓದಿ:

ರೂಮ್ ಒಳಗೆ ಬಿದ್ದಿದ್ದವು ಶವಗಳು

ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡವು ಬಾಗಿಲು ತೆರೆದು ಒಳಹೋದಾಗ ಕೋಣೆಯೊಂದರಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿರುವುದು ಪತ್ತೆಯಾಗಿದೆ. ಒಬ್ಬರ ಶವ ಮಂಚದ ಮೇಲಿದ್ದರೆ, ಮತ್ತೊಬ್ಬರ ಶವ ನೆಲದ ಮೇಲೆ ಬಿದ್ದಿತ್ತು. ಮನೆಯಿಂದ ಭಾರಿ ದುರ್ವಾಸನೆ ಬರಲಾರಂಭಿಸಿರುವುದರಿಂದ ಮತ್ತು ನೆರೆಹೊರೆಯವರು ಇತ್ತೀಚೆಗೆ ಅವರನ್ನು ನೋಡದ ಕಾರಣ, ವೃದ್ಧೆಯರು ಒಂದು ಅಥವಾ ಎರಡು ದಿನಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕೊಲೆಯೋ ಅಥವಾ ವಯೋಸಹಜ ಕಾಯಿಲೆಯೋ?

ಪೊಲೀಸ್ ತಪಾಸಣೆಯ ಸಮಯದಲ್ಲಿ ಮನೆಯಲ್ಲಿ ಯಾವುದೇ ವಸ್ತುಗಳು ಅಸ್ತವ್ಯಸ್ತಗೊಂಡಿಲ್ಲ ಅಥವಾ ದರೋಡೆ ನಡೆದಿರುವ ಕುರುಹುಗಳು ಸಿಕ್ಕಿಲ್ಲ. ಮೃತ ವೃದ್ಧೆಯರು ಇತ್ತೀಚಿನ ದಿನಗಳಲ್ಲಿ ತೀವ್ರ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರೇ ಅಥವಾ ಯಾವುದೇ ಕುಟುಂಬದ ಬೆಂಬಲವಿಲ್ಲದೆ ಒಂಟಿತನ ಹಾಗೂ ಖಿನ್ನತೆಯಿಂದ ಮೃತಪಟ್ಟಿದ್ದಾರೆಯೇ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆಕಸ್ಮಿಕ ಸಾವು ಮತ್ತು ವೈದ್ಯಕೀಯ ತೊಂದರೆಗಳು ಸೇರಿದಂತೆ ಎಲ್ಲಾ ಸಂಭಾವ್ಯ ಕೋನಗಳಿಂದ ತನಿಖೆ ಮುಂದುವರಿದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ಅಸಲಿ ಕಾರಣ ತಿಳಿಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !