ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೋಹವೆಂಬುದು ದೇವಿಯ ಮಾಯೆಯಾಗಿದ್ದು, ಮಾಯೆಯು ಎಲ್ಲವನ್ನೂ ಮರೆಸಿಬಿಡುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಶ್ರೀಗಳು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ ಕಾರ್ಯಕ್ರಮದಲ್ಲಿ ಭಾನುವಾರ ಲಲಿತೋಪಾಖ್ಯಾನ ಕುರಿತು ಪ್ರವಚನವನ್ನು ಅನುಗ್ರಹಿಸಿದರು.

ಸಮುದ್ರ ಮಂಥನವಾಗಿ ಅಮೃತ ಬರುವ ಮೊದಲು ವಿಷವೂ ಬರಬಹುದು. ಅದನ್ನು ಸ್ವೀಕರಿಸಲು ನಂಜುಂಡನಾದ ಶಿವ ಬೇಕು. ಅಮೃತ ಬಂದಾಗ ಅದು ಅಸುರರಿಗೆ ಸಿಗದಿರಲು ಮಹಾವಿಷ್ಣುವೂ ಬೇಕು. ದೇವರೂ ರಾಕ್ಷಸರು ಅಮೃತಕ್ಕಾಗಿ ಯುದ್ಧದಲ್ಲಿ ತೊಡಗಿದ್ದಾಗ ಪ್ರತ್ಯಕ್ಷವಾದ ಮೋಹಿನಿಯು ಕೇವಲ ತನ್ನ ಉಪಸ್ಥಿತಿಯ ಮಾತ್ರದಿಂದ ಯುದ್ಧವನ್ನು ನಿಲ್ಲಿಸುತ್ತಾಳೆ. ಮೋಹದ ಜಾಲಕ್ಕೆ ಸಿಕ್ಕ ರಾಕ್ಷಸರು ಅಮೃತದಿಂದ ವಂಚಿತರಾಗುತ್ತಾರೆ ಎಂದು ಸ್ವಾಮೀಜಿ ವಿವರಿಸಿದರು.

ಜೀವನದಲ್ಲಿ ತಲೆ ಪ್ರತಿಷ್ಠೆಯನ್ನು ಮಾಡಬಾರದು. ದೇವಾಸುರರು ಸಮುದ್ರ ಮಂಥನ ಮಾಡುವಾಗ ರಾಕ್ಷಸರು ತಮಗೆ ವಾಸುಕಿಯ ತಲೆಯ ಭಾಗವೇ ಬೇಕು ಎಂದು ಪಡೆದುಕೊಳ್ಳುತ್ತಾರೆ. ಆದರೆ ಮಂಥನ ಮಾಡುವಾಗ ವಾಸುಕಿಯ ಬಾಯಿಯಿಂದ ಬಂದ ವಿಷದ ಪರಿಣಾಮವಾಗಿ ರಾಕ್ಷಸರ ತೇಜಸ್ಸು ಕ್ಷಯಿಸುತ್ತದೆ. ಹಾಗಾಗಿ ನಾವು ಜೀವನದಲ್ಲಿ ತಲೆ ಪ್ರತಿಷ್ಠೆ ಮಾಡಿದರೆ ಪತನವನ್ನು ಹೊಂದುತ್ತೇವೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಶಿವ-ವಿಷ್ಣು ಕಲಹ ಸಲ್ಲ:
ಶಿವ ಹಾಗೂ ವಿಷ್ಣುವಿನ ಮಧ್ಯೆ ಯಾವುದೇ ಕಲಹವಿಲ್ಲ. ಆದರೆ ಇಂದು ಶೈವರು ಹಾಗೂ ವೈಷ್ಣವರ ಮಧ್ಯೆ ಕಲಹ ಮುಗಿಯುವುದೇ ಇಲ್ಲ. ಶಿವ ಹಾಗೂ ವಿಷ್ಣುವಿನ ಹೆಸರಿನಲ್ಲಿ ಜಗಳ ಸಾಗುತ್ತಲೇ ಇದೆ. ಬಹುಶಃ ದೇವ ಲೋಕದಲ್ಲಿರುವ ಅವರಿಬ್ಬರೂ ಈ ಜಗಳವನ್ನು ನೋಡಿ ನಗುತ್ತಿರಬಹುದು. ಹಾಗಾಗಿ ನಾವು ದೇವರ ಹೆಸರಿನಲ್ಲಿ ಜಗಳವಾಡಬಾರದು ಎಂದು ಸ್ವಾಮೀಜಿ ತಿಳಿಸಿದರು.

ಮಾಜಿ ಅಡ್ವೊಕೇಟ್ ಜನರಲ್ ಅಶೋಕ ಹಾರನಹಳ್ಳಿ ದಂಪತಿ, ಅಶೋಕ ಭಟ್ ಉಪ್ಪುಂದ, ಪ್ರಭಾಕರ ಅಳಗೋಡು, ಹೇಮಂತ್ ಭಾಗ್ವತ್ ಮುಂತಾದವರು ಶ್ರೀಗಳ ಆಶೀರ್ವಾದ ಪಡೆದರು.
ಶತಚಂಡಿಕಾ ಮಹಾಯಾಗ:
ದೇವಿಯ ಉಪಾಸನೆಯ ಅಂಗವಾಗಿ ಇದೇ ಅ.20ರ ಮಂಗಳವಾರದಂದು ಶತಚಂಡಿಕಾ ಯಾಗ ನೆರವೇರಲಿದ್ದು, 100 ದೇವಿ ಸಪ್ತಶತೀ ಪಾರಾಯಣದ ಮೂಲಕ ಶತಚಂಡಿಕಾ ಯಾಗ ನೆರವೇರಲಿದೆ. ಪಾರಾಯಣ ಸೇರಿದಂತೆ ಈ ಮಹಾಯಾಗದಲ್ಲಿ 50 ಋತ್ವಿಜರು ಭಾಗವಹಿಸಲಿದ್ದಾರೆ. ವಿಶೇಷ ಹೋಮ ಕುಂಡ ಸೇರಿದಂತೆ ಯಾಗದ ಸಿದ್ಧತೆಗಳು ನಡೆದಿವೆ.




