May 28, 2026
Thursday, May 28, 2026
spot_img

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಹಿಂದ ಪ್ರತಿಭಟನೆ

ಹೊಸ ದಿಗಂತ ವರದಿ,ಹುಬ್ಬಳ್ಳಿ:

ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಂದ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಪಡೆದಿದೆ ಎಂದು ಆರೋಪಿಸಿ ಅಹಿಂದ ಕರ್ನಾಟಕ ರಾಜ್ಯ ಒಕ್ಕೂಟ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಗುರುವಾರ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಘೋಷಣೆ ಕೂಗಿ ಟೈಯರ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಅಹಿಂದ ಕರ್ನಾಟಕ ರಾಜ್ಯ ಒಕ್ಕೂಟ ರಾಜ್ಯಾಧ್ಯಕ್ಷ ಸಿದ್ದು ತೇಜಿ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಬ್ಲ್ಯಾಕ್ ಮೇಲ್ ಮಾಡಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಪಡೆಯಲಾಗಿದೆ. ಅಹಿಂದ ನಾಯಕರ ಹಾಗೂ ಶಾಸಕರ ಅಭಿಪ್ರಾಯ ಹಾಗೂ ಯಾವುದೇ ರೀತಿ ಚರ್ಚೆ ನಡೆಸದೆ ರಾಜೀನಾಮೆ ಪಡೆದಿರುವುದು ಖಂಡನೀಯ ಎಂದು ಕಿಡಿಕಾರಿದರು.

ಕಾಂಗ್ರೆಸ್ ಮುಕ್ತ ರಾಜ್ಯ ಮಾಡಲು ಯತ್ನ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಹಿಂದ ನಾಯಕರಾಗಿದ್ದ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪಡೆದು, ಕಾಂಗ್ರೆಸ್ ಮುಕ್ತ ರಾಜ್ಯ ಮಾಡಲು ಹೊರಟಿದ್ದಾರೆ. ರಾಹುಲ್ ಗಾಂಧಿ ಕಾಂಗ್ರೆಸ್‌ಗೆ ಕೊನೆಯ ಮೊಳೆ ಹೊಡಿದ್ದಾರೆ. ಇದರಿಂದ ಕಾಂಗ್ರೆಸ್ ನಾಶವಾಗಲಿದೆ ಎಂದರು.

ಮುಂದಿನ ದಿನಗಳಲ್ಲಿ ತಕ್ಕ ಪಾಠ

ಅಹಿಂದ ವರ್ಗ ಯಾವುದೇ ಕಾರಣಕ್ಕೂ ಸುಮ್ಮನಿರಲ್ಲ. ಪರ್ಯಾಯ ರಾಜಕಾರಣ ಮಾಡಲು ನಿರ್ಧರಿಸುತ್ತದೆ. ಶೇ.80 ರಷ್ಟು ಅಹಿಂದ ಸಮುದಾಯ ಸಿದ್ದರಾಮಯ್ಯ ಐದು ವರ್ಷ ಸಿಎಂ ಇರುತ್ತಾರೆ ಎಂಬ ಕಾರಣಕ್ಕೆ ಮತ ಹಾಕಿತ್ತು. ಇದು ಒತ್ತಾಯ ಪೂರ್ವವಾಗಿ ಪಡೆದ ರಾಜೀನಾಮೆಯಾಗಿದೆ. ಇದಕ್ಕೆ ಅಹಿಂದ ವರ್ಗ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದೆ ಎಂದು ತಿಳಿಸಿದರು.

ಅಹಿಂದ ಮುಖಂಡರಾದ ನಿಂಗಪ್ಪ ಜಕ್ಕಲಿ, ಎಸ್.ಎಫ್ ಇಬ್ರಾಹಿಂಪೂರ, ಸುಜಾತ ಸನದಿ, ಬಸವರಾಜ ಹೊರಕೇರಿ, ಸಂಜೀವ ದುಮಕನಾಳ, ಎಂ.ಎಸ್ ಕರಿಯೂರ, ಹನುಮಂತಪ್ಪ ಬ್ಯಾಹಟ್ಟಿ, ಎಚ್.ಬಿ. ಕೌಜಗೇರಿ ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !