May 28, 2026
Thursday, May 28, 2026
spot_img

ನಮ್ಮ ನಾಯಕನಿಗೆ ಅನ್ಯಾಯ ಸಹಿಸಲ್ಲ: ಯಾದಗಿರಿಯಲ್ಲಿ ಸಿದ್ದರಾಮಯ್ಯ ಅಭಿಮಾನಿ ಆತ್ಮಹ*ತ್ಯೆಗೆ ಯತ್ನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಿರ್ಧಾರ ರಾಜ್ಯಾದ್ಯಂತ ತೀವ್ರ ರಾಜಕೀಯ ಸಂಚಲನ ಮೂಡಿಸಿದೆ. ಇತ್ತ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಹರಡುತ್ತಿದ್ದಂತೆ ಯಾದಗಿರಿಯಲ್ಲಿ ಅವರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ರಸ್ತೆಗಿಳಿದು ಭಾರಿ ಪ್ರತಿಭಟನೆ ನಡೆಸಿದ್ದಾರೆ.

ಈ ವೇಳೆ ತೀವ್ರ ಭಾವುಕಗೊಂಡ ಸಿದ್ದರಾಮಯ್ಯ ಕಟ್ಟಾ ಅಭಿಮಾನಿಯೊಬ್ಬರು ಪ್ರತಿಭಟನಾ ಸ್ಥಳದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಸಂಭವಿಸಿದೆ.

ಪ್ರತಿಭಟನಾ ಸ್ಥಳದಲ್ಲೇ ವಿಷ ಕುಡಿದ ಅಭಿಮಾನಿ!

ಯಾದಗಿರಿಯ ಸುಭಾಷ್ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಸಿಎಂ ಹುದ್ದೆಗೆ ರಾಜೀನಾಮೆ ನೀಡಬಾರದು ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಸಿದ್ದರಾಮಯ್ಯ ಪರಮ ಅಭಿಮಾನಿಯೊಬ್ಬರು, ತಮ್ಮ ನಾಯಕನಿಗೆ ಅನ್ಯಾಯವಾಗುತ್ತಿದೆ ಎಂದು ತೀವ್ರ ಭಾವುಕಗೊಂಡು ಎಲ್ಲರ ಕಣ್ಣೆದುರೇ ವಿಷ ಸೇವಿಸಿದ್ದಾರೆ. ಇದನ್ನು ಕಂಡು ಆತಂಕಗೊಂಡ ಸುತ್ತಲಿನ ಪ್ರತಿಭಟನಾಕಾರರು ಮತ್ತು ಪೊಲೀಸರು ತಕ್ಷಣ ಆತನನ್ನು ರಕ್ಷಿಸಿ ಯಾದಗಿರಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ವೈದ್ಯರು ಆತನಿಗೆ ತುರ್ತು ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡುತ್ತಿದ್ದಾರೆ.

ಇದನ್ನೂ ಓದಿ:

ಹೈಕಮಾಂಡ್ ವಿರುದ್ಧ ಅಹಿಂದ ಕಾರ್ಯಕರ್ತರ ಆಕ್ರೋಶ

ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಯಾದಗಿರಿಯ ಪ್ರಮುಖ ರಸ್ತೆಗಳಲ್ಲಿ ಟೈರ್ ಸುಟ್ಟು ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಮತ್ತು ಶೋಷಿತ ಸಮುದಾಯಗಳ ಒಂಟಿ ಧ್ವನಿಯಾಗಿದ್ದಾರೆ. ಅವರನ್ನು ಬಲವಂತವಾಗಿ ಅಧಿಕಾರದಿಂದ ಕೆಳಗಿಳಿಸುತ್ತಿರುವುದು ಇಡೀ ಅಹಿಂದ ಸಮುದಾಯಕ್ಕೆ ಕಾಂಗ್ರೆಸ್ ಮಾಡುತ್ತಿರುವ ದ್ರೋಹ” ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ. ಒಂದು ವೇಳೆ ಹೈಕಮಾಂಡ್ ತನ್ನ ನಿರ್ಧಾರವನ್ನು ಬದಲಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಬಿಗಿ ಪೊಲೀಸ್ ಬಂದೋಬಸ್ತ್

ಅಭಿಮಾನಿಯ ಆತ್ಮಹತ್ಯೆ ಯತ್ನ ಹಾಗೂ ಕಾರ್ಯಕರ್ತರ ಆಕ್ರೋಶದಿಂದಾಗಿ ಯಾದಗಿರಿ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಮುಖ ವೃತ್ತಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳ ಮುಂದೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಿಲ್ಲಾಡಳಿತವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸಾರ್ವಜನಿಕರು ಶಾಂತಿ ಕಾಪಾಡುವಂತೆ ಮನವಿ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !