May 29, 2026
Friday, May 29, 2026
spot_img

ಮುಂಬೈ ಮ್ಯಾನೇಜ್‌ಮೆಂಟ್ ಜೊತೆ ಮುನಿಸು: ಫ್ರಾಂಚೈಸಿ ತೊರೆಯಲಿದ್ದಾರಾ ಹಾರ್ದಿಕ್ ಪಾಂಡ್ಯ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:


ಮುಂಬೈ ಇಂಡಿಯನ್ಸ್ ತಂಡದಲ್ಲಿ ಅಭೂತಪೂರ್ವ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಹಾರ್ದಿಕ್ ಪಾಂಡ್ಯರನ್ನು ತಂಡದ ನಾಯಕತ್ವದಿಂದ ವಜಾಗೊಳಿಸಲು ನಿರ್ಧರಿಸಲಾಗಿದೆ. ಇಷ್ಟೇ ಅಲ್ಲದೆ, ಮ್ಯಾನೇಜ್‌ಮೆಂಟ್‌ನೊಂದಿಗೆ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ಆಲ್‌ರೌಂಡರ್ ಫ್ರಾಂಚೈಸಿಯನ್ನೇ ತೊರೆಯಲು ಯೋಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಆವೃತ್ತಿಯಲ್ಲಿ 14 ಪಂದ್ಯಗಳಲ್ಲಿ ಕೇವಲ 4 ಜಯ ಮಾತ್ರ ಗಳಿಸಿರುವ ಎಂಐ, 2024ರ ಸೀಸನ್‌ಗೂ ಮುನ್ನ ನಾಯಕನಾಗಿ ನೇಮಕಗೊಂಡಿದ್ದ ಹಾರ್ದಿಕ್‌ನ್ನು ಕೈಬಿಡಲು ತೀರ್ಮಾನಿಸಿದಂತಿದೆ. ಹಾಗಾದರೆ, ಅವರ ಸ್ಥಾನಕ್ಕೆ ಮುಂದಿನ ನಾಯಕ ಯಾರು? ಎಂಬ ಪ್ರಶ್ನೆ ಇದೀಗ ಮೂಡಿದೆ.

ಮುಂಬೈ ಇಂಡಿಯನ್ಸ್ ಮುಂದಿನ ನಾಯಕ?

ಮುಂಬೈ ಇಂಡಿಯನ್ಸ್ ತಂಡದ ಮುಂದಿನ ನಾಯಕ ರೋಹಿತ್ ಶರ್ಮಾ ಆಶೀರ್ವಾದ ಹೊಂದಿರುವವರೇ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 2023ರಲ್ಲಿ ರೋಹಿತ್ ಬದಲಿಗೆ ಹಾರ್ದಿಕ್‌ನ್ನು ನಾಯಕನನ್ನಾಗಿ ನೇಮಿಸಿದ ತಪ್ಪು ನಿರ್ಧಾರದಿಂದ ಮ್ಯಾನೇಜ್‌ಮೆಂಟ್ ಈಗ ಪಾಠ ಕಲಿತಿದೆ. ಮುಂದಿನ ನಾಯಕನ ಆಯ್ಕೆಯ ವಿಷಯದಲ್ಲಿ ಮತ್ತೊಮ್ಮೆ ಇಂತಹ ಪರಿಸ್ಥಿತಿ ಮರುಕಳಿಸದಂತೆ ತಡೆಯಲು ಮ್ಯಾನೇಜ್‌ಮೆಂಟ್ ಉತ್ಸುಕವಾಗಿದೆ. ಹೀಗಾಗಿ, ಮುಂಬೈ ಇಂಡಿಯನ್ಸ್ ತಂಡದ ಅತಿ ದೊಡ್ಡ ಹೆಸರಾಗಿರುವ ರೋಹಿತ್, ಮುಂದಿನ ನಾಯಕನ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಆದರೆ, ಮುಂಬೈ ಇಂಡಿಯನ್ಸ್ ನಾಯಕತ್ವದ ವಿಷಯದಲ್ಲಿ ರೋಹಿತ್ ಶರ್ಮಾ ಮರಳಿ ನಾಯಕರಾಗುವ ಯಾವುದೇ ಯೂ-ಟರ್ನ್ ಇರುವುದಿಲ್ಲ ಎಂಬುದು ಈಗಾಗಲೇ ಖಚಿತವಾಗಿದೆ.

ಮುಂಬೈ ಇಂಡಿಯನ್ಸ್‌ನಲ್ಲಿ ಹಾರ್ದಿಕ್ ಉಳಿಯುತ್ತಾರಾ?

ಹಾರ್ದಿಕ್ ವಿಷಯದಲ್ಲಿ ಎಂಐ ಮ್ಯಾನೇಜ್‌ಮೆಂಟ್ ತನ್ನ ಯೋಜನೆಗಳ ಬಗ್ಗೆ ಶೇ. 100 ರಷ್ಟು ಸ್ಪಷ್ಟತೆ ಹೊಂದಿಲ್ಲ ಎಂದು ವರದಿಯಾಗಿದ್ದರೂ, ಮ್ಯಾನೇಜ್‌ಮೆಂಟ್‌ನೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲದ ಕಾರಣ 32 ವರ್ಷದ ಹಾರ್ದಿಕ್ ಫ್ರಾಂಚೈಸಿಯಿಂದ ಹೊರನಡೆಯಲು ಬಯಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಹಾರ್ದಿಕ್ ವರ್ಗಾವಣೆ ಬಯಸಲಿದ್ದಾರೆ. ಇದು ಕೇವಲ ನಾಯಕತ್ವದ ವಿಷಯ ಮಾತ್ರವಲ್ಲದೆ ವೈಯಕ್ತಿಕ ವಾಸ್ತವಗಳಿಗೆ ಸಂಬಂಧಿಸಿದ್ದಾಗಿದೆ. ಮ್ಯಾನೇಜ್‌ಮೆಂಟ್‌ನೊಂದಿಗೆ ಉತ್ತಮ ಬಾಂಧವ್ಯ ಇಲ್ಲದಿದ್ದಾಗ ನೀವು ಆ ಕಂಪನಿಯಲ್ಲಿ ಕೆಲಸ ಮಾಡಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡವು ಹಾರ್ದಿಕ್‌ನ್ನು ಟ್ರೇಡ್ ಡೀಲ್ ಮೂಲಕ ತಂಡಕ್ಕೆ ಸೇರಿಸಿಕೊಂಡಾಗ, ಅವರೊಂದಿಗೆ ಗುಜರಾತ್ ಟೈಟಾನ್ಸ್ ತರಬೇತುದಾರ ಆಶಿಶ್ ನೆಹ್ರಾರನ್ನೂ ಕರೆತರಬೇಕಿತ್ತೇ ಎಂದು ಕೇಳಿದಾಗ, ಮತ್ತೊಂದು ಫ್ರಾಂಚೈಸಿಯಿಂದ ಆಟಗಾರರನ್ನು ಅಥವಾ ಕೋಚ್‌ಗಳನ್ನು ನೇರವಾಗಿ ಕರೆತರುವುದು ಅಂದುಕೊಂಡಷ್ಟು ಸುಲಭವಲ್ಲ ಎಂದು ಮೂಲಗಳು ತಿಳಿಸಿವೆ. ಮುಂಬೈ ಇಂಡಿಯನ್ಸ್‌ನಲ್ಲಿ ಹಾರ್ದಿಕ್ ಪಾಂಡ್ಯ ಭವಿಷ್ಯದ ಕುರಿತು ಮುಂದಿನ ಒಂದೆರಡು ವಾರಗಳಲ್ಲಿ ಸ್ಪಷ್ಟ ಅಪ್ಡೇಟ್ ಸಿಗುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !