ಹೊಸದಿಗಂತ ಹುಬ್ಬಳ್ಳಿ:
ಹುಬ್ಬಳ್ಳಿ-ಧಾರವಾಡ ಜಂಟಿ ಮಹಾನಗರ ಪಾಲಿಕೆಯನ್ನು ವಿಭಜಿಸಿ, ‘ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ’ ರಚಿಸಬೇಕು ಎಂಬ ಹೋರಾಟ ಈಗ ತೀವ್ರಗೊಂಡಿದೆ. ಕಳೆದ 15 ದಿನಗಳಿಂದ ಧಾರವಾಡದಲ್ಲಿ ನಡೆಯುತ್ತಿದ್ದ ಈ ಪ್ರತಿಭಟನೆ, ಶುಕ್ರವಾರ ಹುಬ್ಬಳ್ಳಿ ಮಹಾನಗರ ಪಾಲಿಕೆ ಕಚೇರಿ ಮುಂಭಾಗಕ್ಕೆ ಸ್ಥಳಾಂತರಗೊಂಡಿದೆ.
ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ಪಾಲಿಕೆಯ ಸಾಮಾನ್ಯ ಸಭೆಯ ದಿನದಂದೇ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ಸಮಿತಿಯ ಸದಸ್ಯರು ಪಾಲಿಕೆ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು. “HDMC ಸಾಕು, DMC ಬೇಕು” ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಈ ಹಿಂದೆ ಜಂಟಿ ಪಾಲಿಕೆ ಸಭೆಯಲ್ಲಿ ಅಂಗೀಕರಿಸಲಾಗಿದ್ದ ‘ಗ್ರೇಟರ್ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ’ ರಚನೆಯ ಠರಾವನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.
ಹೊಸ ಠರಾವಿಗೆ ಆಗ್ರಹ:
ಹಿಂದಿನ ಸಾಮಾನ್ಯ ಸಭೆಯ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹೋರಾಟಗಾರರು, ಆ ಠರಾವನ್ನು ಹಿಂಪಡೆದು, ಧಾರವಾಡವನ್ನು ಪ್ರತ್ಯೇಕ ಮಹಾನಗರ ಪಾಲಿಕೆಯನ್ನಾಗಿ ಮಾಡಲು ಅನುಮತಿ ನೀಡುವ ಹೊಸ ನಿರ್ಣಯವನ್ನು ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು.
ಈ ಪ್ರತ್ಯೇಕ ಪಾಲಿಕೆ ಹೋರಾಟದ ನೇತೃತ್ವವನ್ನು ಪ್ರಮುಖರಾದ ಬಿ.ಡಿ. ಹಿರೇಮಠ, ವೆಂಕಟೇಶ ಮಾಚಕನೂರ ಹಾಗೂ ಗುರುರಾಜ ಹುಣಸಿಮರದ ವಹಿಸಿದ್ದರು. ಪ್ರತಿಭಟನೆಗೆ ಪಾಲಿಕೆ ಸದಸ್ಯರಾದ ಶಿವಶಂಕರ ಹಂಪಣ್ಣವರ ಮತ್ತು ಕವಿತಾ ಕಬ್ಬೇರ ಸೇರಿದಂತೆ ಹಲವು ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ತಮ್ಮ ಬೆಂಬಲ ಸೂಚಿಸಿದರು.



