May 29, 2026
Friday, May 29, 2026
spot_img

ಸುಪ್ರೀಂಕೋರ್ಟ್ ಅಂಗಳದಲ್ಲಿ ನೀಟ್ ಕೇಸ್: ಪ್ರಧಾನಿ ಮೋದಿಯಿಂದ ಲೋಪದೋಷಗಳ ಮೇಲ್ವಿಚಾರಣೆ ಎಂದ ಕೇಂದ್ರ ಸರಕಾರ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ವಿಚಾರಣೆ ಕೈಗೆತ್ತಿಕೊಂಡಿದ್ದು, ಈ ವೇಳೆ ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪದೋಷಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕೇಂದ್ರ ಸರಕಾರಕ್ಕೆ ‘ಸುಪ್ರೀಂ’ ಪ್ರಶ್ನೆ

ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರ ದ್ವಿಸದಸ್ಯ ಪೀಠವು, ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣವಾದ ಲೋಪಗಳಿಗೆ ಹೊಣೆಗಾರಿಕೆಯನ್ನು ಪ್ರಶ್ನಿಸಿದ್ದು, ಉನ್ನತ ಅಧಿಕಾರ ಸಮಿತಿಯ ಇದ್ದರೂ, ಈ ಘಟನೆ ನಡೆದಿದ್ದರೆ ಮೂಲ ಶಿಫಾರಸಿನಲ್ಲಿ ಏನೋ ತಪ್ಪಿದೆ ಅಥವಾ ಸರಿಯಾದ ಅನುಷ್ಠಾನವಿಲ್ಲ ಎಂದು ಹೇಳಿದೆ.

ಸರಕಾರಕ್ಕೆ ಇದೆ ಯುವಕರ ಕಾಳಜಿ

ಇದಕ್ಕೆ ಉತ್ತರಿಸಿದ ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೇಂದ್ರ ಸರಕಾರವು ಯುವಜನರ ಕುರಿತು ಗಂಭೀರವಾಗಿ ಕಾಳಜಿ ವಹಿಸುತ್ತಿದೆ. ಖುದ್ದು ಪ್ರಧಾನಿ ಮೋದಿ ಅವರೇ ಯಾವುದೇ ಲೋಪವಾಗದಂತೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದ್ದಾರೆ.

ವಿಚಾರಣೆ ಮುಂದೂಡಿಕೆ

ಮುಂಬರುವ ಪರೀಕ್ಷೆಗಳಿಗೂ ಉನ್ನತ ಮಟ್ಟದ ಕಾರ್ಯನಿರ್ವಾಹಕರು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಯಾವುದೇ ರೀತಿಯ ತೊಂದರೆಯಾಗದಂತೆ ಹೊಸ ಕಾರ್ಯವಿಧಾನಗಳನ್ನು ಪರಿಚಯಿಸಲಾಗಿದೆ ಎಂದು ಸಾಲಿಸಿಟರ್ ಜನರಲ್‌ ಮಾಹಿತಿ ನೀಡಿದರು. ಈ ವೇಳೆ ಕೋರ್ಟ್, ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿ, ವಿಚಾರಣೆಯನ್ನು ಜುಲೈ ಎರಡನೇ ವಾರಕ್ಕೆ ಮುಂದೂಡಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !