May 30, 2026
Saturday, May 30, 2026
spot_img

ಕನ್ನಡ ಉಳಿಸಿ ಮಾತಿಗೆ ಸೀಮಿತವಲ್ಲ: ಕನ್ನಡ ಶಾಲೆಗೆ ಸೇರುವ ಮಕ್ಕಳಿಗಿಲ್ಲಿ ರೂ.5 ಸಾವಿರ ಫಿಕ್ಸೆಡ್ ಡೆಪಾಸಿಟ್!

ಐ.ಬಿ. ಸಂದೀಪ್ ಕುಮಾರ್

ಮಂಗಳೂರು:

ಇನ್ನೇನು ಕೆಲ ದಿನಗಳಲ್ಲೇ ಶಾಲೆಗಳಲ್ಲಿ ಮಕ್ಕಳ ಚಿಲಿಪಿಲಿ ಸದ್ದು ಕೇಳಿ ಬರಲಿದೆ. ಹೊಸದಾಗಿ ಶಾಲೆಗೆ ಪದಾರ್ಪಣೆ ಮಾಡುವ ಪುಟಾಣಿಗಳಲ್ಲಿ ಎಲ್ಲಿಲ್ಲದ ಸಂಭ್ರಮ, ಕುತೂಹಲ, ಆತಂಕ. ತಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳಿಗೆ ಸೇರಿಸಲು ತವಕಿಸುವ ಹೆತ್ತವರು ಒಂದೆಡೆಯಾದರೆ, ಸರಕಾರಿ ಶಾಲೆಗಳತ್ತ ಮುಖ ಮಾಡುವವರು ಇನ್ನೊಂದೆಡೆ. ಸರಕಾರಿ ಶಾಲೆಗಳು ಕನ್ನಡ ಮಾಧ್ಯಮ ಎಂಬ ಅಸಡ್ಡೆ, ಇಂಗ್ಲೀಷ್ ಮೀಡಿಯಂ ಶಾಲೆಗಳೆಂದರೆ ಭವಿಷ್ಯ ರೂಪಿಸುವ ಶಿಕ್ಷಣ ಸಂಸ್ಥೆಗಳು ಎಂಬ ಆಶಾಭಾವನೆ ಹೆತ್ತವರಲ್ಲಿ. ಈ ಹಿನ್ನಲೆಯಲ್ಲೇ ಇಲ್ಲೊಬ್ಬರು ದಾನಿ ಕನ್ನಡ ಶಾಲೆಗೆ ಸೇರುವ ಮಕ್ಕಳಿಗೆ ಆರ್ಥಿಕವಾಗಿ ಪ್ರೋತ್ಸಾಹ ನೀಡುತ್ತಾ ಎಲೆಮರೆಯ ಕಾಯಿಯಂತೆ ಇದ್ದುಕೊಂಡು ಕನ್ನಡಮ್ಮನ ಸೇವೆ ಸಲ್ಲಿಸುತ್ತಿದ್ದಾರೆ.


ಕಾರ್ಯಕರ್ತೃಗಳು

ಕಳೆದ 97 ವರ್ಷಗಳಿಂದ ಮಂಗಳೂರಿನ ಅಶೋಕನಗರ ಹಿರಿಯ ಪ್ರಾಥಮಿಕ ಶಾಲೆ ಲಕ್ಷಾಂತರ ಮಂದಿಗೆ ಶಿಕ್ಷಣವನ್ನು ನೀಡಿ ಉಜ್ವಲ ಬದುಕನ್ನು ಕಟ್ಟಿ ಕೊಟ್ಟಿದೆ. ಶತಮಾನೋತ್ಸವದತ್ತ ದಾಪುಗಾಲಿಕ್ಕುತ್ತಿರುವ ಅಶೋಕನಗರ(ಸರಕಾರಿ ಅನುದಾಣಿತ) ಹಿ.ಪ್ರಾ. ಶಾಲೆಗೆ 1ರಿಂದ 3ನೇ ತರಗತಿಗೆ ಹೊಸದಾಗಿ ಸೇರುವ ಮಕ್ಕಳ ಹೆಸರಿನಲ್ಲಿ ರೂ.5 ಸಾವಿರ ನಗದು ಮೊತ್ತವನ್ನು ದಾನಿಯೋರ್ವರು ನಿರಖು ಠೇವಣಿಯನ್ನಾಗಿ ಇರಿಸಿದ್ದಾರೆ. ಈ ಶಾಲೆಯಲ್ಲಿ ಶಿಕ್ಷಣ ಪೂರ್ಣಗೊಂಡ ಬಳಿಕ ನಿರಖು ಠೇವಣಿ ಇರಿಸಿದ ಮೊತ್ತ ಬಡ್ಡಿ ಸಹಿತ ವಿದ್ಯಾರ್ಥಿಗೆ ಲಭಿಸುತ್ತದೆ. ಅಶೋಕನಗರದ ಚಾರ್ಟೆಡ್ ಅಕೌಂಟೆಂಟ್ ದಿನಕರ ರಾವ್-ಉಷಾ ರಾವ್ ದಂಪತಿ ಇಂತಹ ಒಂದು ವಿಶಿಷ್ಟ ಸೇವಾ ಕಾರ್ಯಕರ್ತೃಗಳು.


ವಿದ್ಯಾವರ್ಧಕ ಸಂಘ

ಪ್ರಸ್ತುತ ಶಾಲೆಯಲ್ಲಿ 7 ಮಂದಿ ಶಿಕ್ಷಕರು, 99 ವಿದ್ಯಾರ್ಥಿಗಳಿದ್ದಾರೆ. ಶಿಕ್ಷಕರಿಗೆ ಅಶೊಕನಗರ ವಿದ್ಯಾವರ್ಧಕ ಸಂಘ, ದಾನಿಗಳ ಮೂಲಕ ಸಂಬಳವನ್ನು ನೀಡಲಾಗುತ್ತಿದೆ. ಶಾಲಾ ಮಕ್ಕಳಿಗೆ ಪ್ರತೀ ಗುರುವಾರ ಪಠ್ಯೇತರ ಚಟುವಟಿಕೆ, ಮಂಗಳವಾರ ಆಸಕ್ತ ಮಕ್ಕಳಿಗೆ ಯಕ್ಷಗಾನ ತರಬೇತಿಯನ್ನು ನೀಡಲಾಗುತ್ತಿದೆ. ಆನ್‍ಲೈನ್ ಮೂಲಕ ಮಕ್ಕಳಿಗೆ ಇಂಗ್ಲೀಷ್ ಕಲಿಸುವ ವ್ಯವಸ್ಥೆ ಇಲ್ಲಿದೆ. ದಾನಿ ದಿನಕರ ರಾವ್ ಅವರು ಇದಕ್ಕೆ ಸ್ಥಳಾವಕಾಶ ಒದಗಿಸಿ ಕೊಟ್ಟಿದ್ದಾರಲ್ಲದೆ ಯಕ್ಷಗಾನ ಕಲಿಯುವ ಮಕ್ಕಳಿಗೆ ಚಹಾ ತಿಂಡಿಯ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ದಾನಿಗಳ ನೆರವಿನಿಂದ ಶಾಲೆಯನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗಲು ಅಶೋಕನಗರ ವಿದ್ಯಾವರ್ಧಕ ಸಂಘ ಶ್ರಮಿಸುತ್ತಿದೆ. ಪ್ರಸ್ತುತ ಕಲ್ಬಾವಿ ರಾಜೇಂದ್ರ ಅಧ್ಯಕ್ಷರಾಗಿ, ಸೀತಾರಾಮ ಪುರಾಣಿಕ್ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಸಂಘ ಸಂಸ್ಥೆಗಳ ಸಹಕಾರ

ಶಾಲೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುವಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ. ಶಾಲೆಯ ಅಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ, ಬಿಎಸ್ಸೆಎನ್ನೆಲ್ ನಿವೃತ್ತ ಉದ್ಯೋಗಿ ಶ್ರೀನಿವಾಸ ಕರ್ಕೇರ ಅವರ ಅವಿರತ ಪರಿಶ್ರಮ ಇದೆ. ಇಂದಿನ ಹಂಗಾಮಿ ಅಧ್ಯಕ್ಷ ಬಿ. ಆನಂದ ಕರ್ಕೇರ ಅವರ ಮುಂದಾಳತ್ವದಲ್ಲಿ ಶಾಲೆಗೆ ಹೊಸ ಆಯಾಮ ಕಲ್ಪಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಜತೆಗೆ, ಹೊಸದಾಗಿ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳಿಗೆ ಸಹಾಯಧನ ಒದಗಿಸಲು ದಾನಿಗಳ ಜತೆ ಕೈ ಜೋಡಿಸಲು ಮುಂದಾಗಿದೆ. ಪ್ರಸ್ತುತ, ಜೋಯ್ಸ್ ಹೆನ್ರಿಟಾ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


ಸರಕಾರ ಗಮನ ಹರಿಸಲಿ

2022-23ನೇ ಸಾಲಿನಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಕಾಶೀರಾಯ ಪಾಟೀಲ್ ಸರಕಾರದಿಂದ ವೇತನ ಪಡೆಯುತ್ತಿದ್ದ ಕೊನೆಯ ಶಿಕ್ಷಕರಾಗಿದ್ದಾರೆ. ಆ ಬಳಿಕ ಸರಕಾರ ಈ ಶಾಲೆಗೆ ಶಿಕ್ಷಕರನ್ನು ಒದಗಿಸಿಲ್ಲ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಸರಕಾರಿ ವೇತನವನ್ನು ನೀಡಬೇಕು ಎಂಬುದು ಶಾಲಾ ಹಳೆ ವಿದ್ಯಾರ್ಥಿ ಸಂಘದ ಮಾಜಿ ಪ್ರ.ಕಾರ್ಯದರ್ಶಿ ಶ್ರೀನಿವಾಸ ಕರ್ಕೇರ ಅವರ ಒತ್ತಾಯ.


ಹೊಸ ಯೋಜನೆಗಳಿವೆ

ನಮ್ಮ ಮಾತೃ ಭಾಷೆ ಕನ್ನಡ ಆಗಿರುವ ಕಾರಣ ಕನ್ನಡ ಶಾಲಾ ಮಕ್ಕಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮಕ್ಕಳ ಹೆಸರಿನಲ್ಲಿ ನಿರಖು ಠೇವಣಿ ಇರಿಸುವ ಯೋಜನೆಗೆ ಅಡಿಪಾಯ ಹಾಕಿದ್ದೇನೆ. ಮುಂದಕ್ಕೆ ಸಂಘ ಸಂಸ್ಥೆಗಳು ಇದನ್ನು ಮುಂದುವರಿಸಲಿದೆ. ನಾನು ಶಾಲೆಯ ಅಭಿವೃದ್ಧಿ ಇತರೇ ಯೋಜನೆಗಳನ್ನು ಹಾಕಿಕೊಂಡಿದ್ದೇನೆ ಎನ್ನುತ್ತಾರೆ ದಾನಿಗಳಾದ ದಿನಕರ ರಾವ್.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !