May 30, 2026
Saturday, May 30, 2026
spot_img

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಡಿಕೆ ಶಿವಕುಮಾರ್ ಪದಗ್ರಹಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಕಾರಣದಲ್ಲಿ ಭಾರಿ ಬೆಳವಣಿಗೆಯೊಂದು ನಡೆದಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕನಾಗಿ ಡಿ.ಕೆ.ಶಿವಕುಮಾರ್‌ ಅವರು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.

ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಿಎಲ್‌ಪಿ ಸಭೆಯಲ್ಲಿ ಆರಂಭಿಕ ಮಾತುಗಳನ್ನಾಡಿದ ಸಿದ್ದರಾಮಯ್ಯ ಅವರು, ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿ ನಿರ್ಣಯ ಮಂಡಿಸಿದರು. ಈ ಪ್ರಸ್ತಾಪಕ್ಕೆ ಹಿರಿಯ ನಾಯಕ ಜಿ.ಪರಮೇಶ್ವರ್ ಅವರು ಅನುಮೋದನೆ ನೀಡಿದರು. ಸಭೆಯಲ್ಲಿದ್ದ ಉಳಿದ ಶಾಸಕರು ಕೂಡ ಕೈ ಎತ್ತುವ ಮೂಲಕ ಡಿಕೆಶಿ ಆಯ್ಕೆಯನ್ನು ಸರ್ವಾನುಮತದಿಂದ ಬೆಂಬಲಿಸಿದರು. ಇದೇ ವೇಳೆ ಸಿದ್ದರಾಮಯ್ಯ ಅವರು ತಮ್ಮ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಘೋಷಿಸಿದರು. ಇಡೀ ಆಯ್ಕೆ ಪ್ರಕ್ರಿಯೆಯು ಕೇವಲ ಐದೇ ನಿಮಿಷಗಳಲ್ಲಿ ಅತ್ಯಂತ ವೇಗವಾಗಿ ಮುಕ್ತಾಯಗೊಂಡಿತು.

ಸಿಎಂ ಕಚೇರಿಯಲ್ಲಿ ರಹಸ್ಯ ಸಭೆ, ರಾಹುಲ್ ಗಾಂಧಿಗೆ ಸಂದೇಶ:

ಆಯ್ಕೆ ಪ್ರಕ್ರಿಯೆಯ ಬೆನ್ನಲ್ಲೇ ಸಿಎಲ್‌ಪಿ ಸಭೆಗೆ 10 ನಿಮಿಷಗಳ ವಿರಾಮ ನೀಡಲಾಯಿತು. ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಮುಖ್ಯಮಂತ್ರಿಗಳ ಕಚೇರಿಗೆ ಆಗಮಿಸಿದರು. ಡಿ.ಕೆ.ಶಿವಕುಮಾರ್ ಅವರ ಅನುಪಸ್ಥಿತಿಯಲ್ಲಿ ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಿಎಂ ಕಚೇರಿಯಲ್ಲಿ ಪ್ರತ್ಯೇಕ ಮತ್ತು ರಹಸ್ಯ ಸಭೆ ನಡೆಸಿದರು. ಈ ವೇಳೆ ವೇಣುಗೋಪಾಲ್ ಅವರು ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರಿಗೆ ದೂರವಾಣಿ ಕರೆ ಮಾಡಿ, ಸಿದ್ದರಾಮಯ್ಯ ಅವರ ರಾಜೀನಾಮೆ ನಿರ್ಧಾರವನ್ನು ಅಧಿಕೃತವಾಗಿ ತಿಳಿಸಿದರು. ಎಐಸಿಸಿ ಹೈಕಮಾಂಡ್ ಆದೇಶದ ಅನ್ವಯವೇ ಈ ಇಡೀ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ನಾಯಕರು ತದನಂತರ ಮತ್ತೆ ಸಿಎಲ್‌ಪಿ ಸಭೆಯಲ್ಲಿ ಭಾಗವಹಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !