June 1, 2026
Monday, June 1, 2026
spot_img

10 ಫೈನಲ್, 10 ಟ್ರೋಫಿ! ಸೋಲನ್ನೇ ಕಾಣದ ಜೋಶ್ ಹೇಜಲ್‌ವುಡ್‌ ಅಜೇಯ ದಾಖಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾದ ಸ್ಟಾರ್ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಮೈದಾನಕ್ಕಿಳಿದರೆ ಸಾಕು, ಆ ತಂಡಕ್ಕೆ ಅದೃಷ್ಟ ಒಲಿಯುತ್ತದೆ ಎನ್ನುವ ಮಾತು ಕ್ರಿಕೆಟ್ ವಲಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ತಮ್ಮ ನಿಖರ ಲೈನ್ ಮತ್ತು ಲೆಂತ್ ಬೌಲಿಂಗ್ ಹಾಗೂ ಅದ್ಭುತ ಲಯದ ಜೊತೆಗೆ ‘ಲಕ್ಕಿ ಚಾರ್ಮ್’ ಎನಿಸಿಕೊಂಡಿರುವ ಹೇಜಲ್‌ವುಡ್, ತಮ್ಮ ವೃತ್ತಿಜೀವನದಲ್ಲಿ ಆಡಿದ ಎಲ್ಲಾ 10 ಪ್ರಮುಖ ಫೈನಲ್ ಪಂದ್ಯಗಳಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸಿ ವಿಶ್ವ ದಾಖಲೆ ಬರೆದಿದ್ದಾರೆ.

ಆರ್‌ಸಿಬಿ ಮುಡಿಗೇರಿದ ಸತತ 2ನೇ ಐಪಿಎಲ್ ಪ್ರಶಸ್ತಿ!

ಕಳೆದ ವರ್ಷ (2025) ಹಾಗೂ ಈ ಬಾರಿಯ (2026) ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಹೇಜಲ್‌ವುಡ್ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ. 2026ರ ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಒಟ್ಟು 13 ಪಂದ್ಯಗಳನ್ನು ಆಡಿದ ಅವರು 15 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ.

ವಿಶೇಷವಾಗಿ, ಏಪ್ರಿಲ್ 27 ರಂದು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಲೀಗ್ ಪಂದ್ಯದಲ್ಲಿ ಕೇವಲ 3.3 ಓವರ್‌ಗಳಲ್ಲಿ 12 ರನ್ ನೀಡಿ 4 ವಿಕೆಟ್ ಉರುಳಿಸುವ ಮೂಲಕ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಈ ಮಾರಕ ಬೌಲಿಂಗ್ ಪ್ರದರ್ಶನವೇ ಆರ್‌ಸಿಬಿ ಪ್ಲೇಆಫ್ ಹಾದಿಯನ್ನು ಸುಲಭಗೊಳಿಸಿತ್ತು.

ಹೇಜಲ್‌ವುಡ್ ಮುಡಿಗೇರಿದ 10 ಐತಿಹಾಸಿಕ ಟ್ರೋಫಿಗಳ ವಿವರ:

ಅಂಡರ್-19 ಕ್ರಿಕೆಟ್‌ನಿಂದ ಹಿಡಿದು ವಿಶ್ವದ ಅತಿ ದೊಡ್ಡ ಟಿ20 ಲೀಗ್‌ವರೆಗೂ ಜೋಶ್ ಹೇಜಲ್‌ವುಡ್ ಆಡಿದ ಫೈನಲ್‌ಗಳಲ್ಲಿ ಸೋತ ಇತಿಹಾಸವೇ ಇಲ್ಲ. ಅವರ ಟ್ರೋಫಿಗಳ ಪಟ್ಟಿ ಹೀಗಿದೆ:

2010: ಐಸಿಸಿ ಅಂಡರ್-19 ವಿಶ್ವಕಪ್ ಚಾಂಪಿಯನ್

2012: ಚಾಂಪಿಯನ್ಸ್ ಲೀಗ್ ಟಿ20 (ಸಿಡ್ನಿ ಸಿಕ್ಸರ್ಸ್)

2015: ಐಸಿಸಿ ಏಕದಿನ ವಿಶ್ವಕಪ್ (ಆಸ್ಟ್ರೇಲಿಯಾ)

2020: ಬಿಗ್‌ಬ್ಯಾಶ್ ಲೀಗ್ ಟಿ20 (ಸಿಡ್ನಿ ಸಿಕ್ಸರ್ಸ್‌)

2021: ಐಪಿಎಲ್ ಚಾಂಪಿಯನ್ (ಚೆನ್ನೈ ಸೂಪರ್ ಕಿಂಗ್ಸ್)

2021: ಐಸಿಸಿ ಟಿ20 ವಿಶ್ವಕಪ್ (ಆಸ್ಟ್ರೇಲಿಯಾ)

2023: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಆಸ್ಟ್ರೇಲಿಯಾ)

2023: ಐಸಿಸಿ ಏಕದಿನ ವಿಶ್ವಕಪ್ (ಆಸ್ಟ್ರೇಲಿಯಾ)

2025: ಐಪಿಎಲ್ ಚಾಂಪಿಯನ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

2026: ಐಪಿಎಲ್ ಚಾಂಪಿಯನ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

ಫೈನಲ್ ಪಂದ್ಯಗಳಲ್ಲಿ ನೂರಕ್ಕೆ ನೂರರಷ್ಟು ಗೆಲುವಿನ ದಾಖಲೆ ಹೊಂದಿರುವ ಹೇಜಲ್‌ವುಡ್, ಸದ್ಯ ಕ್ರಿಕೆಟ್ ಜಗತ್ತಿನ ಅತ್ಯಂತ ಯಶಸ್ವಿ ಹಾಗೂ ಅದೃಷ್ಟದ ಆಟಗಾರನಾಗಿ ಹೊರಹೊಮ್ಮಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !