June 1, 2026
Monday, June 1, 2026
spot_img

18 ವರುಷಗಳ ಕಾಯುವಿಕೆಗೆ ಸತತ 2 ಟ್ರೋಫಿಗಳ ಉಡುಗೊರೆ: ಆರ್​​ಸಿಬಿ ಆರ್ಭಟಕ್ಕೆ ಶರಣಾದ ವಿರೋಧಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹದಿನೆಂಟು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ಇತಿಹಾಸ ಬರೆದಿದೆ. ಕಳೆದ ಸೀಸನ್​​ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿಹಿಡಿದಿದ್ದ ಬೆಂಗಳೂರು ಪಡೆ, ಈ ಬಾರಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಧೂಳಿಕುಕ್ಕಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಐತಿಹಾಸಿಕ ಬ್ಯಾಕ್-ಟು-ಬ್ಯಾಕ್ ಟ್ರೋಫಿ ಗೆಲುವಿನ ಬೆನ್ನಲ್ಲೇ, ಸದಾ ಆರ್​​ಸಿಬಿ ತಂಡವನ್ನು ಟೀಕಿಸುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಆಟಗಾರ ಅಂಬಾಟಿ ರಾಯುಡು ಈಗ ತಂಡವನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ.

ಯಾವಾಗಲೂ ಆರ್‌ಸಿಬಿ ವಿರುದ್ಧ ಕಟು ಮಾತುಗಳನ್ನಾಡುತ್ತಿದ್ದ ಅಂಬಾಟಿ ರಾಯುಡು, ಇದೀಗ ಬೆಂಗಳೂರು ತಂಡವನ್ನು ಸಾಟಿಯಿಲ್ಲದ ಸರದಾರರು ಅಂದರೆ ‘ಬಿಗ್ ಬಾಯ್ಸ್’ ಎಂದು ಬಣ್ಣಿಸಿದ್ದಾರೆ. ಇಎಸ್‌ಪಿಎನ್ ಕ್ರಿಕ್‌ಇನ್ಫೋ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಆರ್‌ಸಿಬಿ ತಂಡದ ಈ ಅದ್ಭುತ ಆಟದ ಶೈಲಿ ಮತ್ತು ಪರಿವರ್ತನೆಯನ್ನು ಮನಸಾರೆ ಒಪ್ಪಿಕೊಂಡಿದ್ದಾರೆ.

“ಒಂದು ಕಾಲದಲ್ಲಿ ಆರ್‌ಸಿಬಿ ತಂಡ ಕೇವಲ ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರರ ಪ್ರದರ್ಶನದ ಮೇಲೆ ಮಾತ್ರ ನಿರ್ಭರ ಕೊಂಡಿತ್ತು. ಆದರೆ ಈಗಿನ ತಂಡ ಸಂಪೂರ್ಣ ಬದಲಾಗಿದೆ. ಇಡೀ ತಂಡ ಒಂದಾಗಿ, ಸಾಮೂಹಿಕ ಹೋರಾಟದ ಮೂಲಕ ಯಶಸ್ಸು ಸಾಧಿಸುತ್ತಿದೆ” ಎಂದು ರಾಯುಡು ವಿಶ್ಲೇಷಿಸಿದ್ದಾರೆ.

ಸಿಎಸ್​​ಕೆ, ಮುಂಬೈಗಿಂತಲೂ ಆರ್‌ಸಿಬಿ ಬಲಿಷ್ಠ:

ಬೆಂಗಳೂರು ತಂಡದ ಸದ್ಯದ ಪ್ರದರ್ಶನವನ್ನು ಶ್ಲಾಘಿಸಿದ ರಾಯುಡು, “ಇವರೇ ಈಗ ಐಪಿಎಲ್‌ನ ಅಸಲಿ ಬಿಗ್ ಬಾಯ್ಸ್. ಪ್ರಸ್ತುತ ಫಾರ್ಮ್‌ನಲ್ಲಿರುವ ಆರ್‌ಸಿಬಿ ತಂಡವು ಈ ಹಿಂದಿನ ಚಾಂಪಿಯನ್ಸ್ ಆದ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳಿಗಿಂತಲೂ ಹೆಚ್ಚು ಬಲಿಷ್ಠವಾಗಿ ಕಾಣಿಸುತ್ತಿದೆ” ಎಂದಿದ್ದಾರೆ.

ಇದು ಕೇವಲ ಗೆಲುವಲ್ಲ, ಬದಲಿಗೆ ಐಪಿಎಲ್‌ನಲ್ಲಿ ‘ಆರ್‌ಸಿಬಿ ಯುಗ’ ಆರಂಭವಾಗಿದೆ ಎಂದು ಅವರು ಹೇಳಿದ್ದಾರೆ. ಸದ್ಯದ ಬೆಂಗಳೂರು ತಂಡದ ಬಲಕ್ಕೆ ಹೋಲಿಸಿದರೆ ಬೇರೆ ಯಾವುದೇ ತಂಡಗಳು ಅವರ ಹತ್ತಿರವೂ ಸುಳಿಯಲು ಸಾಧ್ಯವಿಲ್ಲ ಎಂಬುದು ರಾಯುಡು ಅವರ ಅಭಿಪ್ರಾಯ.

ಯಾವಾಗಲೂ ಆರ್‌ಸಿಬಿ ಸೋಲನ್ನು ಸಂಭ್ರಮಿಸುತ್ತಿದ್ದ ರಾಯುಡು ಅವರ ಈ ದಿಢೀರ್ ಯು-ಟರ್ನ್ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ರಾಯುಡು ಅವರ ಹಳೆಯ ಟೀಕೆಗಳನ್ನು ನೆನಪಿಸಿಕೊಳ್ಳುತ್ತಿರುವ ಆರ್​​ಸಿಬಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅವರ ಕಾಲೆಳೆಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !