ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲೋ ಇರುವ ಹೆಣ್ಣಿಗೂ ಇನ್ನೆಲ್ಲೋ ಇರುವ ಗಂಡಿಗೂ ಜೋಡಿ ಮಾಡೋದು ಭಗವಂತನಂತೆ! ಆದರೆ ಎಲ್ಲ ಜೋಡಿಗಳಿಗೂ ಜೊತೆಯಲ್ಲಿ ಬಾಳುವ ಅದೃಷ್ಟ ಇರೋದಿಲ್ಲ. ಇಲ್ಲೊಂದು ಜೋಡಿಯ ಬದುಕು ಮದುವೆ ಮುಗಿಸಿ ಕೆಲವೇ ಗಂಟೆಗಳಲ್ಲಿ ಛಿದ್ರ ಛಿದ್ರವಾಗಿದೆ!
ಅಮೆರಿಕದ ಜಾರ್ಜಿಯಾದಲ್ಲಿ ಭಾರತ ಮೂಲದ ಪೈಲಟ್ ಮದುವೆಯಾಗಿ ಹನಿಮೂನ್ಗೆ ಹೋಗ್ತಿದ್ದ ವೇಳೆ ವಿಮಾನ ಪತನವಾಗಿ ಮೃತಪಟ್ಟಿದ್ದಾರೆ. ಡೆಲ್ಟಾ ಏರ್ಲೈನ್ಸ್ನಲ್ಲಿ ಸಹ ಪೈಲಟ್ ಆಗಿ ಕೆಲಸ ಮಾಡುತ್ತಿದ್ದ ಡೇವ್ ಫಿಜಿ ಮೃತರು. ಇವರು ಕೇರಳ ಮೂಲದವರು. ಅದ್ಧೂರಿಯಾಗಿ ಮದುವೆಯಾದ ನಂತರ ಹೆಲಿಕಾಪ್ಟರ್ನಲ್ಲಿ ಇಬ್ಬರೂ ಹನಿಮೂನ್ಗೆಂದು ತೆರಳುತ್ತಿದ್ದರು. ಈ ವೇಳೆ ಮದುವೆ ಮಂಟಪದ ಬಳಿಯೇ ವಿಮಾನ ಪತನಗೊಂಡಿದೆ.
ಈ ಅಪಘಾತದಲ್ಲಿ ಮುಖ್ಯ ಪೈಲಟ್ ಹಾಗೂ ಡೇವ್ ಮೃತಪಟ್ಟಿದ್ದಾರೆ. ಡೇವ್ ಪತ್ನಿ ಜೆಸ್ಸಿ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ವೃತ್ತಿಯಲ್ಲಿ ನರ್ಸ್ ಆಗಿರುವ ಜೆಸ್ಸಿ ವಿಮಾನ ಪತನದ ನಂತರ ಪತಿಯನ್ನು ತಮ್ಮ ತೊಡೆಯ ಮೇಲೆ ಮಲಗಿಸಿಕೊಂಡಿದ್ದಾರೆ. ವಿಮಾನ ಕಾಡಿನ ಒಳಗೆ ಪತನವಾದ ಕಾರಣ ರಕ್ಷಣಾ ಸಿಬ್ಬಂದಿ ಅಲ್ಲಿಗೆ ತಲುಪಲು ಸುಮಾರು ಆರು ಗಂಟೆಗಳ ಸಮಯ ಬೇಕಾಗಿದೆ. ಅಲ್ಲಿಯವರೆಗೂ ಜೆಸ್ಸಿ ತಮ್ಮ ಪತಿಯನ್ನು ತೊಡೆಯ ಮೇಲೆಯೇ ಮಲಗಿಸಿಕೊಂಡಿದ್ದಾರೆ.
ಡೇವ್ ಹಾಗೂ ಜೆಸ್ಸಿ ಹತ್ತು ವರ್ಷಗಳಿಂದ ಪ್ರೀತಿಸಿದವರು. ತಮ್ಮ ಪ್ರೀತಿಯ ಹುಡುಗ ಇನ್ನು ನನ್ನ ಪತಿ ಎಂದು ಜೆಸ್ಸಿ ಖುಷಿಪಟ್ಟಿದ್ದರು. ಆದರೆ ಕೆಲವೇ ಕ್ಷಣದಲ್ಲಿ ಎಲ್ಲವೂ ನುಚ್ಚುನೂರಾಗಿದೆ. ಡೇವ್ ಮೃತಪಟ್ಟಿದ್ದಾರೆ ಎಂದು ಜೆಸ್ಸಿಗೆ ತಿಳಿದಿದೆ. ತೊಡೆಯ ಮೇಲೆಯೇ ಗಂಡನನ್ನು ಮಲಗಿಸಿಕೊಂಡು ಜೀವ ಇಲ್ಲದಂತೆ ಕುಳಿತಿದ್ದರು ಎನ್ನಲಾಗಿದೆ.
ಇನ್ನು ಹೆಲಿಕಾಪ್ಟರ್ ಹತ್ತುವ ಮುನ್ನವೇ ಡೇವ್ಗೆ ಇಂದು ಹೋಗೋದು ಬೇಡ ಎನ್ನಿಸಿತ್ತಂತೆ. ಮುಖ್ಯ ಪೈಲಟ್ ಬಳಿ ಬಂದು ಇಂದು ಮಂಜು ಹೆಚ್ಚಿದೆ ಎಂದು ವಾರ್ನಿಂಗ್ ನೀಡಿದ್ದರಂತೆ. ಆದರೆ ಇದರಿಂದ ಸಮಸ್ಯೆ ಆಗೋದಿಲ್ಲ ಎಂದು ಮುಖ್ಯ ಪೈಲಟ್ ಹೇಳಿದ ನಂತರ ಡೇವ್ ಹೆಲಿಕಾಪ್ಟರ್ ಹತ್ತಿದ್ದಾರೆ.



