June 1, 2026
Monday, June 1, 2026
spot_img

ಕೇಂದ್ರದ ನೀತಿಗೆ ಉಲ್ಟಾ ಹೊಡೆದ ಅಣ್ಣಾಮಲೈ! ತಮಿಳುನಾಡಿನಲ್ಲಿ ಬಿಜೆಪಿ ಪಾಳಯಕ್ಕೆ ಬಿಗ್ ಶಾಕ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ರಾಜಕೀಯದಲ್ಲಿ ಈಗ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ಮುಂದಿನ ನಡೆ ಬಗ್ಗೆ ಭಾರೀ ಚರ್ಚೆಗಳು ಆರಂಭವಾಗಿವೆ. ಸದಾ ಸುದ್ದಿಯಲ್ಲಿರುವ ಅಣ್ಣಾಮಲೈ ಅವರು ಶೀಘ್ರದಲ್ಲೇ ಬಿಜೆಪಿಗೆ ಗುಡ್‌ಬೈ ಹೇಳಿ, ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲಿದ್ದಾರೆ ಎಂಬ ಊಹಾಪೋಹಗಳು ಕಾಲಿವುಡ್ ನಾಡಿನಲ್ಲಿ ಸಂಚಲನ ಮೂಡಿಸಿವೆ.

ಮೂಲಗಳ ಪ್ರಕಾರ, ಅಣ್ಣಾಮಲೈ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಲು ಸಮಯ ಕೋರಿದ್ದಾರೆ. ಅಷ್ಟೇ ಅಲ್ಲದೆ, ಮುಂಬರುವ ಜೂನ್ 3ರಂದು ಅವರು ತಮ್ಮ ರಾಜಕೀಯ ಭವಿಷ್ಯದ ಕುರಿತು ಮಹತ್ವದ ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆಯು ದಕ್ಷಿಣ ಭಾರತದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಬಿಜೆಪಿ ನಾಯಕರೊಂದಿಗೆ ಭಿನ್ನಾಭಿಪ್ರಾಯಕ್ಕೆ ಕಾರಣವೇನು?

ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ ತ್ರಿಭಾಷಾ ನೀತಿಯನ್ನು ಅಣ್ಣಾಮಲೈ ಅವರು ಬಹಿರಂಗವಾಗಿಯೇ ವಿರೋಧಿಸಿದ್ದರು. ಪ್ರಮುಖವಾಗಿ 9ನೇ ತರಗತಿ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳನ್ನು ಕಡ್ಡಾಯಗೊಳಿಸುವ ನಿರ್ಧಾರಕ್ಕೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ತಮಿಳುನಾಡಿನ ಪ್ರಾದೇಶಿಕ ಭಾಷಾ ಪ್ರೇಮ ಹಾಗೂ ರಾಜಕೀಯ ಸೂಕ್ಷ್ಮತೆಯನ್ನು ಅರಿತಿರುವ ಅಣ್ಣಾಮಲೈ ಅವರ ಈ ನಡೆ, ಬಿಜೆಪಿ ಹೈಕಮಾಂಡ್‌ನ ಕೆಂಗಣ್ಣಿಗೆ ಗುರಿಯಾಗಿತ್ತು ಎನ್ನಲಾಗಿದೆ. ಈ ಭಾಷಾ ವಿವಾದದ ಬೆನ್ನಲ್ಲೇ ಬಿಜೆಪಿ ನಾಯಕತ್ವದೊಂದಿಗೆ ಅವರ ಭಿನ್ನಾಭಿಪ್ರಾಯಗಳು ತಾರಕಕ್ಕೇರಿದ್ದು, ಈಗ ಹೊಸ ಪಕ್ಷದ ಸ್ಥಾಪನೆಯ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !