ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಚಿನ್ನದ ಮಾರುಕಟ್ಟೆ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಹಳದಿ ಲೋಹದ ಖರೀದಿಯಲ್ಲಿ ಭಾರಿ ಇಳಿಕೆ ದಾಖಲಾಗಿದೆ. ಇದರ ನೇರ ಪರಿಣಾಮವಾಗಿ ಭಾರತಕ್ಕೆ ಆಗುತ್ತಿದ್ದ ಚಿನ್ನದ ಆಮದು ಪ್ರಮಾಣದಲ್ಲೂ ಭಾರಿ ಕುಸಿತ ಕಂಡುಬಂದಿದೆ ಎಂದು ಮಾರುಕಟ್ಟೆ ವರದಿಗಳು ತಿಳಿಸಿವೆ.
ಕೇವಲ 7.5 ಟನ್‌ಗೆ ಕುಸಿದ ಆಮದು ಪ್ರಮಾಣ!
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಚಿನ್ನದ ಆಮದು ಪ್ರಮಾಣದಲ್ಲಿ ಶೇಕಡಾ 70 ರಷ್ಟು ಬೃಹತ್ ಇಳಿಕೆಯಾಗಿದೆ. ಕಳೆದ ವರ್ಷ ಭಾರತವು ಬರೋಬ್ಬರಿ 27 ಟನ್ ಚಿನ್ನವನ್ನು ವಿದೇಶದಿಂದ ಆಮದು ಮಾಡಿಕೊಂಡಿತ್ತು. ಆದರೆ, ಈ ಬಾರಿ ಕೇವಲ 7.5 ಟನ್ ಚಿನ್ನ ಮಾತ್ರ ಆಮದಾಗಿದೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ. ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನಾಭರಣ ವ್ಯಾಪಾರವು ಶೇ. 50 ರಿಂದ ಶೇ. 70 ರಷ್ಟು ಕುಸಿದಿದೆ ಎಂದು ಜ್ಯುವೆಲ್ಲರಿ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಮಾರುಕಟ್ಟೆ ತಜ್ಞರ ಪ್ರಕಾರ, ಚಿನ್ನದ ವಹಿವಾಟು ಈ ಮಟ್ಟಿಗೆ ತಳ ಕಚ್ಚಲು ಪ್ರಮುಖವಾಗಿ ಎರಡು ಕಾರಣಗಳಿವೆ:
ಆಮದು ಸುಂಕದ ಏರಿಕೆ: ಇತ್ತೀಚೆಗೆ ಚಿನ್ನದ ಮೇಲಿನ ಆಮದು ಸುಂಕವನ್ನು ಹೆಚ್ಚಳ ಮಾಡಿರುವುದು ಗ್ರಾಹಕರ ಜೇಬಿಗೆ ಹೊರೆಯಾಗಿದೆ. ಇದು ನೇರವಾಗಿ ಮಾರುಕಟ್ಟೆಯ ಬೇಡಿಕೆಯ ಮೇಲೆ ನೆಗೆಟಿವ್ ಪರಿಣಾಮ ಬೀರಿದೆ.
ಅಧಿಕ ಮಾಸದ ಪ್ರಭಾವ: ಪ್ರಸ್ತುತ ಅಧಿಕ ಮಾಸ ನಡೆಯುತ್ತಿರುವುದರಿಂದ ದೇಶದಲ್ಲಿ ಮದುವೆ, ಮುಂಜಿ, ಗೃಹಪ್ರವೇಶದಂತಹ ಯಾವುದೇ ಶುಭ ಕಾರ್ಯಗಳು ಜರುಗುತ್ತಿಲ್ಲ. ಹೀಗಾಗಿ ಜನರು ಚಿನ್ನಾಭರಣ ಅಂಗಡಿಗಳತ್ತ ಮುಖ ಮಾಡುತ್ತಿಲ್ಲ.
ಒಟ್ಟಾರೆಯಾಗಿ, ಗ್ರಾಹಕರಿಲ್ಲದೆ ಜ್ಯುವೆಲ್ಲರಿ ಅಂಗಡಿಗಳು ನಿರೀಕ್ಷಿತ ವಹಿವಾಟು ನಡೆಸಲಾಗದೆ ಕಷ್ಟ ಅನುಭವಿಸುತ್ತಿವೆ. ಮುಂಬರುವ ಹಬ್ಬದ ಸೀಸನ್ ಹಾಗೂ ಮದುವೆ ದಿನಗಳು ಆರಂಭವಾದರೆ ಮಾತ್ರ ಚಿನ್ನದ ಮಾರುಕಟ್ಟೆ ಮತ್ತೆ ಚೇತರಿಸಿಕೊಳ್ಳಬಹುದು ಎಂದು ವ್ಯಾಪಾರಿಗಳು ನಂಬಿದ್ದಾರೆ.



