June 2, 2026
Tuesday, June 2, 2026
spot_img

ಹೋರಾಡುತ್ತೇನೆ ಇಲ್ಲವೇ ಸಾಯುತ್ತೇನೆ…ಕೋಲ್ಕತ್ತಾದಲ್ಲಿ ಮತ್ತೆ ಬೀದಿಗಿಳಿದ ಮಮತಾ ಬ್ಯಾನರ್ಜಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಮಾಜಿ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮತ್ತೆ ಹೋರಾಟಕ್ಕೆ ಸಜ್ಜಾಗಿದ್ದು, ಪಕ್ಷದ ನಾಯಕ ಸಂಸದ ಅಭಿಷೇಕ್ ಬ್ಯಾನರ್ಜಿ ಹಾಗೂ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಾಳಿಗಳು ಹಾಗೂ ಚುನಾವಣೋತ್ತರ ಹಿಂಸಾಚಾರವನ್ನು ಖಂಡಿಸಿ ಕೋಲ್ಕತ್ತಾದ ಹೃದಯಭಾಗದಲ್ಲಿ ಧರಣಿ ಆರಂಭಿಸಿದ್ದಾರೆ.

ಕೋಲ್ಕತ್ತಾದ ಎಸ್‌ಪ್ಲನೇಡ್‌ನ ವೈ-ಚಾನೆಲ್ ವೃತ್ತದಲ್ಲಿ ತಮ್ಮ ನೂರಾರು ಬೆಂಬಲಿಗರೊಂದಿಗೆ ದೀದಿ ಧರಣಿ ಶುರುಮಾಡಿದ್ದು, ಈ ವೇಳೆ ನಾನು ಬಂಗಾಳದ ಜನರಿಗಾಗಿ ಹೋರಾಡುತ್ತೇನೆ ಇಲ್ಲವೇ ಸಾಯುತ್ತೇನೆ ಎಂದು ಘೋಷಣೆಗಳನ್ನು ಕೂಗಿದ್ದಾರೆ.

ವೇದಿಕೆ ನಿರ್ಮಿಸಲು ಸಿಗದ ಅನುಮತಿ

ಇದಕ್ಕೂ ಮುನ್ನ ರಾಣಿ ರಾಶ್ಮೋನಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಕೋರಲಾಗಿತ್ತು. ಆದರೆ, ಕೋಲ್ಕತ್ತಾ ಪೊಲೀಸರು ಭದ್ರತೆಯ ನೆಪವೊಡ್ಡಿ ನಿರಾಕರಿಸಿದ್ದರು. ಇದರ ಜೊತೆಗೆ ವೇದಿಕೆ ನಿರ್ಮಿಸಲು ಹಾಗೂ ಮೈಕ್ರೋಫೋನ್ ಬಳಸಲು ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದಾರೆ. ಈ ಬೆನ್ನಲ್ಲೇ ಆಕ್ರೋಶಗೊಂಡ ಮಮತಾ ಬ್ಯಾನರ್ಜಿ, ರಸ್ತೆ ಮಧ್ಯದಲ್ಲೇ ಕುಳಿತುಕೈಯಲ್ಲೇ ಹ್ಯಾಂಡ್ ಮೆಗಾಫೋನ್ ಹಿಡಿದು ನೆರೆದಿದ್ದ ಸಹಸ್ರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಟಿಎಂಸಿ ಕಾರ್ಯಕರ್ತರ ಮೇಲೆ ದೌರ್ಜನ್ಯ

ರಾಜ್ಯಾದ್ಯಂತ ಟಿಎಂಸಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ಎಸಗಲಾಗುತ್ತಿದೆ ಎಂದ ದೀದಿ , ರಾಜ್ಯದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಕಾನೂನುಬಾಹಿರವಾಗಿ ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಟೀಕಿಸಿದರು.

ಧರಣಿ ಸತ್ಯಾಗ್ರಹದಲ್ಲಿ ಪಕ್ಷದ ಹಿರಿಯ ನಾಯಕರಾದ ಮದನ್ ಮಿತ್ರಾ, ಡೆರೆಕ್ ಒಬ್ರಿಯನ್, ಕಲ್ಯಾಣ್ ಬ್ಯಾನರ್ಜಿ ಮತ್ತು ಡೋಲಾ ಸೇನ್ ಸೇರಿದಂತೆ ಘಟಾನುಘಟಿ ನಾಯಕರು ಮಮತಾ ಅವರಿಗೆ ಸಾಥ್ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !