ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಮತ್ತೆ ವಂದೇ ಮಾತರಂ ಗೀತೆ ವಿಚಾರ ಸುದ್ದಿಯಲ್ಲಿದ್ದು, ಈ ಬಾರಿ ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಈಗಾಗಲೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಎಲ್ಲಾ ಐದು ಚರಣಗಳನ್ನು ಹಾಡುವುದನ್ನು, ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಈ ಬೆನ್ನಲ್ಲೇ ಕೇರಳದ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸಮಾರಂಭದ ವೇಳೆ, ವಂದೇ ಮಾತರಂ ಗೀತೆ ಹಾಡುವಾಗ ವಿಡಿ ಸತೀಶನ್ ಎದ್ದು ನಿಲ್ಲದ ಕಾರಣಕ್ಕೆ ವಿವಾದ ಸೃಷ್ಟಿಯಾಗಿತ್ತು. ಇದೀಗ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ರತಿ ಬಾರಿ ವಂದೇ ಮಾತರಂ ಗೀತೆಯ ಎಲ್ಲಾ ಐದು ಚರಣಗಳನ್ನು ಹಾಡುವುದು ಅನಗತ್ಯ ಎಂದು ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಕೇವಲ ರಾಜಕೀಯ ವಿಚಾರಕ್ಕೆ ವಂದೇ ಮಾತರಂ ಗೀತೆಯ ಗೌರವವನ್ನು ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಎಲ್ಲಾ ಐದು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿರುವುದು ಅನವಶ್ಯಕ ಎಂದು ತರೂರ್ ಹೇಳಿದರು.
ಎಲ್ಲರಿಗೂ ಐದು ಚರಣಗಳ ಪರಿಚಯವಿಲ್ಲ
ಕೇರಳದಲ್ಲಿ ವಂದೇ ಮಾತರಂ ಗೀತೆ ಮಾರ್ಗಸೂಚಿಯನ್ನು ಪಾಲಿಸುವುದು ಕಷ್ಟ. ಇಲ್ಲಿ ಎಲ್ಲರಿಗೂ ಎಲ್ಲಾ ಐದು ಚರಣಗಳ ಪರಿಚಯವಿಲ್ಲ. ಹೀಗಾಗಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆ ಹಾಡುವಾಗ ಜನರು ಗೊಂದಲಕ್ಕೆ ಒಳಗಾಗುತ್ತಾರೆ. ಅದರ ಜೊತೆ ರಾಷ್ಟ್ರಗೀತೆಗಿಂತ ಐದು ಪಟ್ಟು ಹೆಚ್ಚು ಉದ್ದವಿರುವ ಕಾರಣ ಅಸಹಜತೆ ಉಂಟಾಗುತ್ತದೆ ಎಂದು ಶಶಿ ತರೂರ್ ಹೇಳಿದ್ದಾರೆ.
ಬಿಜೆಪಿ ನಾಯಕರು ಐದು ಚರಣ ಹಾಡಲಿ
ನಮಗೆ ರಾಷ್ಟ್ರೀಯ ಗೀತೆಯ ಕುರಿತು ಗೌರವವಿದೆ. ಈ ಹಿಂದೆಯೂ ನಾವು ಸ್ವಾತಂತ್ರ್ಯ ಹೋರಾಟದ ದಿನಗಳಿಂದ ವಂದೇ ಮಾತರಂನ ಮೊದಲ ಚರಣವನ್ನು ಮಾತ್ರ ಹಾಡುತ್ತಾ ಬಂದಿದ್ದೇವೆ. ಆದರೆ ಇದೀಗ ಎಲ್ಲಾ ಐದು ಚರಣಗಳನ್ನು ಹಾಡುವುದನ್ನು ಕಡ್ಡಾಯ ಮಾಡಿರುವುದು ಒತ್ತಡದಂತೆ ಭಾಸವಾಗುತ್ತಿದೆ. ಬಿಜೆಪಿ ನಾಯಕರು ನಮ್ಮ ಮುಂದೆ ನಿಂತು ಎಲ್ಲಾ ಐದು ಚರಣಗಳನ್ನು ಹಾಡಲಿ ಎಂದು ಸವಾಲು ಹಾಕಿದರು.



