June 2, 2026
Tuesday, June 2, 2026
spot_img

ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಾಯೋಗಿಕ ಸಂಚಾರ ದಿಢೀರ್ ರದ್ದು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಆರಂಭಕ್ಕೆ ತಾತ್ಕಾಲಿಕ ಹಿನ್ನಡೆಯಾಗಿದ್ದು, ಜೂನ್ 3 ರಂದು ನಡೆಯಬೇಕಿದ್ದ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವನ್ನು ನೈಋತ್ಯ ರೈಲ್ವೆ ವಲಯವು ಕೊನೆಯ ಘಳಿಗೆಯಲ್ಲಿ ರದ್ದುಗೊಳಿಸಿದೆ.

ಈ ಕುರಿತು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಾರಿಗೆ ವ್ಯವಸ್ಥಾಪಕರ ಕಚೇರಿಯು ಅಧಿಕೃತ ಆದೇಶ ಹೊರಡಿಸಿದ್ದು, ಪ್ರಾಯೋಗಿಕ ಸಂಚಾರದ ಪ್ರಸ್ತಾವನೆಯನ್ನು ಹಿಂಪಡೆದಿದೆ. ಜೂನ್ 3 ರಂದು ಯಶವಂತಪುರ ಮತ್ತು ಮಂಗಳೂರು ನಡುವೆ ನಡೆಯಬೇಕಿದ್ದ ವಂದೇ ಭಾರತ್ ಪ್ರಾಯೋಗಿಕ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.

ಸವಾಲಿನ ಘಾಟ್ ಮಾರ್ಗ

ಶಿರಾಡಿ ಘಾಟ್ (ಸುಬ್ರಹ್ಮಣ್ಯ ರೋಡ್-ಸಕಲೇಶಪುರ) ವಿಭಾಗದ ರೈಲ್ವೆ ಮಾರ್ಗದ ಮೂಲಕ 8 ಬೋಗಿಗಳ ವಂದೇ ಭಾರತ್ ರೈಲಿನ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಈ ಪ್ರಾಯೋಗಿಕ ಪರೀಕ್ಷೆಯು ನಿಗದಿಯಾಗಿತ್ತು.

ರದ್ದಾಗಲು ಕಾರಣವೇನು?

ಸದ್ಯ ರೈಲ್ವೆ ಇಲಾಖೆಯು ಈ ಪ್ರಾಯೋಗಿಕ ಸಂಚಾರದ ರದ್ದತಿಗೆ ಯಾವುದೇ ಅಧಿಕೃತ ಕಾರಣವನ್ನು ಬಹಿರಂಗಪಡಿಸಿಲ್ಲವಾದರೂ, ಮೂಲಗಳ ಪ್ರಕಾರ, ಕೆಲವು ತಾಂತ್ರಿಕ ಕಾರಣದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಮತ್ತೆ ಯಾವಾಗ ಪ್ರಾಯೋಗಿಕ ಸಂಚಾರ?

ಬೆಂಗಳೂರು ಮತ್ತುಮಂಗಳೂರು ನಡುವಿನ ವಂದೇ ಭಾರತ್ ಸೇವೆಗಳು ಉಭಯ ವಲಯಗಳ ವಾಣಿಜ್ಯ, ಪ್ರವಾಸೋದ್ಯಮ ಮತ್ತು ದೈನಂದಿನ ಪ್ರಯಾಣಿಕರಿಗೆ ವರದಾನವಾಗಲಿವೆ. ಹೀಗಾಗಿ, ಈ ಯೋಜನೆ ಸಂಪೂರ್ಣವಾಗಿ ರದ್ದಾಗಿಲ್ಲ, ಬದಲಿಗೆ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದೆ. ಸುರಕ್ಷತಾ ಮೌಲ್ಯಮಾಪನಗಳು ಮುಗಿದ ನಂತರ ಭಾರತೀಯ ರೈಲ್ವೆಯು ಹೊಸ ಪರಿಷ್ಕೃತ ಪ್ರಾಯೋಗಿಕ ದಿನಾಂಕವನ್ನು ಪ್ರಕಟಿಸುವ ನಿರೀಕ್ಷೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !