September 27, 2026
Sunday, September 27, 2026
spot_img

ಮಡಿಕೇರಿ ಜೈಲಿನಲ್ಲಿ ಭೀಕರ ಕೊಲೆ: ಹಳೇ ಹಗೆತನಕ್ಕೆ ವಿಚಾರಣಾಧೀನ ಖೈದಿ ಬಲಿ

ಹೊಸದಿಗಂತ ಮಡಿಕೇರಿ:

ಕೊಡಗು ಜಿಲ್ಲೆಯ ಮಡಿಕೇರಿ ನಗರದ ಹೊರವಲಯದ ಕರ್ಣಂಗೇರಿಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದ ಭೀಕರ ಚೂರಿ ಇರಿತದ ಪ್ರಕರಣಕ್ಕೆ ಸಂಬಂಧಿಸಿದಂತೆ, ತೀವ್ರವಾಗಿ ಗಾಯಗೊಂಡಿದ್ದ ವಿಚಾರಣಾಧೀನ ಖೈದಿಯೊಬ್ಬರು ಮಂಗಳವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿಗಳಾದ ರವಿ ಮತ್ತು ಇಂದ್ರಾವತಿ ದಂಪತಿಯ ಏಕೈಕ ಪುತ್ರ ಹೇಮಂತ್ (26) ಕೊಲೆಯಾದ ದುರ್ದೈವಿ. ಈತನ ಮೇಲೆ ಸ್ವಂತ ಸಂಬಂಧಿಯಾದ ರಾಜೇಶ್ (36) ಎಂಬಾತನೇ ಜೈಲಿನೊಳಗೆ ಚೂರಿಯಿಂದ ಮನಬಂದಂತೆ ಇರಿದು ಕೊಲೆ ಮಾಡಿದ್ದಾನೆ.

ಕೊಲೆಗೆ ಕಾರಣವಾದ ಜಾಗದ ವಿವಾದ!

ಮೃತರ ಕುಟುಂಬದ ಮೂಲಗಳ ಪ್ರಕಾರ, ರಾಜೇಶ್ ಹಾಗೂ ಹೇಮಂತ್ ಕುಟುಂಬಗಳ ನಡುವೆ ದೀರ್ಘಕಾಲದಿಂದ ಆಸ್ತಿ (ಜಾಗದ) ವಿವಾದವಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಗಲಾಟೆ ನಡೆದಿತ್ತು. ರಾಜೇಶನ ಸಹೋದರ, ಮಾಜಿ ಸೈನಿಕ ಗಣೇಶ್ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆ ಪೊಲೀಸರು ಹೇಮಂತ್, ಆತನ ತಂದೆ, ತಾಯಿ ಮತ್ತು ಮಾವನ ವಿರುದ್ಧ ಪ್ರಕರಣ ದಾಖಲಿಸಿ ನಾಲ್ವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ವಿಷಾದದ ಸಂಗತಿಯೆಂದರೆ, ಇದೇ ರಾಜೇಶ್ ಕಳೆದ ಎರಡು ವರ್ಷಗಳ ಹಿಂದೆ ತನ್ನ ಅತ್ತೆಯನ್ನೇ ಕೊಲೆ ಮಾಡಿದ ಆರೋಪದ ಮೇಲೆ ಇದೇ ಮಡಿಕೇರಿ ಜೈಲಿನಲ್ಲಿದ್ದ. ಹಳೇ ಹಗೆತನವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ರಾಜೇಶ್, ಹೇಮಂತ್ ಹಾಗೂ ಆತನ ಕುಟುಂಬವನ್ನು ಮುಗಿಸಲು ಸಂಚು ರೂಪಿಸಿದ್ದ ಎನ್ನಲಾಗಿದೆ. ಜೈಲಿನೊಳಗೆ ಹೇಮಂತ್‌ನ ದೇಹದ ವಿವಿಧ ಭಾಗಗಳಿಗೆ ಬರೋಬ್ಬರಿ 8 ಬಾರಿ ಚೂರಿಯಿಂದ ಇರಿದು ಕ್ರೂರತ್ವ ಮೆರೆದಿದ್ದಾನೆ.

ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ:

ಕಳೆದ ಎರಡು ವರ್ಷಗಳಿಂದ ಈ ಎರಡು ಕುಟುಂಬಗಳ ನಡುವೆ ಮನೆಗೆ ಬೆಂಕಿ ಇಡುವುದು, ಜೀಪ್ ಹರಿಸಿ ಕೊಲೆಗೆ ಯತ್ನಿಸುವಂತಹ ಘಟನೆಗಳು ನಡೆಯುತ್ತಲೇ ಇದ್ದವು. ಆದರೂ ಪೊಲೀಸರು ಮುನ್ನೆಚ್ಚರಿಕೆ ವಹಿಸದೆ, ಏಕಾಏಕಿ ಹೇಮಂತ್ ಕುಟುಂಬವನ್ನು ಅದೇ ಜೈಲಿಗೆ ಕಳುಹಿಸಿದ್ದು ಪೊಲೀಸರ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ ಎಂದು ಸಾರ್ವಜನಿಕರು ಹಾಗೂ ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

ತಂದೆ-ತಾಯಿ ಜೈಲಿನಲ್ಲಿರುವಾಗಲೇ ಮಗನ ಅಂತ್ಯಸಂಸ್ಕಾರ!

ಸದ್ಯ ಹೇಮಂತ್ ತಂದೆ, ತಾಯಿ ಹಾಗೂ ಮಾವ ಇಂದಿಗೂ ಜೈಲಿನಲ್ಲೇ ಇದ್ದಾರೆ. ಮೃತನ ದೇಹವನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಕುಟುಂಬದ ಇತರ ಸದಸ್ಯರು ಮೃತದೇಹವನ್ನು ಟಿ.ಶೆಟ್ಟಿಗೇರಿ ಗ್ರಾಮಕ್ಕೆ ತಂದು ಅಂತ್ಯಸಂಸ್ಕಾರ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮಡಿಕೇರಿ ಜೈಲಿನ ಭದ್ರತೆಯ ಬಗ್ಗೆಯೂ ಈಗ ತೀವ್ರ ಸರಣಿ ಪ್ರಶ್ನೆಗಳು ಮೂಡಿವೆ.

Must Read