ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ನಲ್ಲಿ ತಮ್ಮ ಬಿರುಗಾಳಿಯ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಲೋಕವನ್ನೇ ಬೆರಗುಗೊಳಿಸಿದ ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಬ್ರಾಂಡ್ ಮೌಲ್ಯ ಈಗ ರಾಕೆಟ್ ವೇಗದಲ್ಲಿ ಜಿಗಿದಿದೆ. ಕ್ರೀಡಾ ಮೈದಾನದಲ್ಲಿ ರನ್ ಮಳೆ ಹರಿಸಿದ ಈ ಯುವ ಬ್ಯಾಟರ್ ಬೆನ್ನಿಗೆ ಈಗ ದೇಶದ ದೈತ್ಯ ಕಾರ್ಪೊರೇಟ್ ಮತ್ತು ಜಾಹೀರಾತು ಸಂಸ್ಥೆಗಳು ಬಿದ್ದಿವೆ.
ಕ್ರೀಡಾ ಪಾನೀಯಗಳು, ಪೌಷ್ಠಿಕಾಂಶದ ಉತ್ಪನ್ನಗಳು ಹಾಗೂ ಪ್ರಮುಖ ಶೂ ತಯಾರಿಕಾ ಕಂಪನಿಗಳು ವೈಭವ್ ಅವರನ್ನು ತಮ್ಮ ಬ್ರಾಂಡ್ ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲು ಭಾರಿ ಪೈಪೋಟಿ ನಡೆಸುತ್ತಿದ್ದು, ಈಗಾಗಲೇ ತೆರೆಮರೆಯಲ್ಲಿ ಮಾತುಕತೆಗಳು ಚುರುಕಾಗಿವೆ.
ಕೇವಲ 15ರ ಹರೆಯದಲ್ಲೇ ಅದ್ಭುತ ಸಾಧನೆ ಮಾಡಿರುವ ಸೂರ್ಯವಂಶಿ ಅವರಿಗೆ ದೀರ್ಘಾವಧಿಯ ಕ್ರಿಕೆಟ್ ಭವಿಷ್ಯವಿದೆ. ಇದೇ ಕಾರಣಕ್ಕೆ ಜಾಹೀರಾತು ಮಾರುಕಟ್ಟೆಯಲ್ಲಿ ಅವರಿಗೆ ಹಿಂದೆಂದೂ ಕಾಣದ ಬೇಡಿಕೆ ಸೃಷ್ಟಿಯಾಗಿದೆ. ಸದ್ಯಕ್ಕೆ ಕಂಪನಿಗಳು ಭಾರಿ ಮೊತ್ತದ ದೀರ್ಘಾವಧಿ ಒಪ್ಪಂದಗಳಿಗಿಂತ, 2 ರಿಂದ 3 ವರ್ಷಗಳ ಅಲ್ಪಾವಧಿ ಒಪ್ಪಂದಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಿವೆ. ಮುಂಬರುವ ದಿನಗಳಲ್ಲಿ ಅವರ ಫಾರ್ಮ್ ಹಾಗೂ ಜನಪ್ರಿಯತೆಯನ್ನು ಆಧರಿಸಿ ಒಪ್ಪಂದವನ್ನು ವಿಸ್ತರಿಸಲು ಕಾರ್ಪೊರೇಟ್ ಸಂಸ್ಥೆಗಳು ಯೋಜಿಸುತ್ತಿವೆ.



