ಇತ್ತೀಚಿನ ದಿನಗಳಲ್ಲಿ ವಯಸ್ಕರಷ್ಟೇ ಅಲ್ಲದೆ, ಸಣ್ಣ ಮಕ್ಕಳಲ್ಲೂ ನಿದ್ರಾಹೀನತೆಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಗಾಢವಾದ ನಿದ್ರೆ ಅತ್ಯಂತ ಅಗತ್ಯ. ಆದರೆ, ರಾತ್ರಿಯಿಡೀ ಮಗು ನಿದ್ರಿಸದೆ ತೊಂದರೆ ಅನುಭವಿಸುತ್ತಿದ್ದರೆ, ಅದಕ್ಕೆ ಕೇವಲ ಹಠ ಹಿಡಿಯುವುದು ಮಾತ್ರ ಕಾರಣವಾಗಿರುವುದಿಲ್ಲ. ಅದರ ಹಿಂದೆ ಹಲವು ಶಾರೀರಿಕ ಮತ್ತು ಪರಿಸರಕ್ಕೆ ಸಂಬಂಧಿಸಿದ ಕಾರಣಗಳಿರುತ್ತವೆ.
ಮಕ್ಕಳಲ್ಲಿ ನಿದ್ರಾಹೀನತೆ ಉಂಟಾಗಲು ಪ್ರಮುಖ ಕಾರಣಗಳು
ಶಾರೀರಿಕ ಮತ್ತು ಆರೋಗ್ಯದ ತೊಂದರೆಗಳು
ಶೇ. 20 ಕ್ಕೂ ಹೆಚ್ಚು ಶಿಶುಗಳಲ್ಲಿ ಗ್ಯಾಸ್ ಅಥವಾ ಆಮ್ಲೀಯತೆ ಕಾರಣದಿಂದಾಗಿ ರಾತ್ರಿ ಹೊತ್ತಿನಲ್ಲಿ ತೀವ್ರ ಹೊಟ್ಟೆನೋವು ಕಾಣಿಸಿಕೊಂಡು ನಿದ್ರೆಗೆ ಭಂಗ ಬರುತ್ತದೆ. ಇನ್ನು, 6 ತಿಂಗಳಿಂದ 2 ವರ್ಷದೊಳಗಿನ ಮಕ್ಕಳಲ್ಲಿ ಹಲ್ಲುಗಳು ಮೂಡುವಾಗ ಇವಿನ ನೋವು ಮತ್ತು ಜ್ವರ ಕಾಣಿಸಿಕೊಳ್ಳುವುದರಿಂದ ರಾತ್ರಿ ಪದೇ ಪದೇ ಎಚ್ಚರಗೊಳ್ಳುತ್ತಾರೆ. ನೆಗಡಿ, ಕೆಮ್ಮು, ಬ್ಲಾಕ್ ಆದ ಮೂಗು ಅಥವಾ ಕಿವಿ ಸೋಂಕಿನಿಂದಾಗಿ ಮಕ್ಕಳಿಗೆ ಮಲಗಿದಾಗ ಉಸಿರಾಟದ ತೊಂದರೆ ಉಂಟಾಗುತ್ತದೆ.
ಕಳಪೆ ಜೀವನಶೈಲಿ ಮತ್ತು ತಪ್ಪು ಅಭ್ಯಾಸಗಳು
ಮಲಗುವ ಮುನ್ನ ಮೊಬೈಲ್ ಅಥವಾ ಟಿವಿ ನೋಡುವುದರಿಂದ ಅದರಿಂದ ಹೊರಹೊಮ್ಮುವ ನೀಲಿ ಬೆಳಕು, ಮೆಲಟೋನಿನ್ ಎಂಬ ನಿದ್ರೆಯ ಹಾರ್ಮೋನ್ ಉತ್ಪತ್ತಿಯನ್ನು ತಡೆಯುತ್ತದೆ. ಪ್ರತಿದಿನ ಬೇರೆ ಬೇರೆ ಸಮಯದಲ್ಲಿ ಮಲಗಿಸುವುದು ಮತ್ತು ಹಗಲಿನಲ್ಲಿ ಅತಿಯಾಗಿ ನಿದ್ರೆ ಮಾಡಿಸುವುದರಿಂದ ರಾತ್ರಿಯ ನಿದ್ರೆಯ ಚಕ್ರ ಏರುಪೇರಾಗುತ್ತದೆ. ಮಗುವನ್ನು ತೂಗಿ, ಎದೆಯುಣಿಸಿ ಅಥವಾ ಪಕ್ಕದಲ್ಲೇ ಮಲಗಿಸಿ ರೂಢಿ ಮಾಡಿದ್ದರೆ, ರಾತ್ರಿ ಮಧ್ಯೆ ಎಚ್ಚರವಾದಾಗ ಮಗು ತಾನಾಗಿಯೇ ಮಲಗಲು ಕಷ್ಟಪಡುತ್ತದೆ.
ವಾತಾವರಣ ಮತ್ತು ಮಾನಸಿಕ ಕಾರಣಗಳು
ಕೋಣೆಯಲ್ಲಿ ಅತಿಯಾದ ಬೆಳಕು, ಸದ್ದು, ಅಥವಾ ತಾಪಮಾನದಲ್ಲಿನ ಏರುಪೇರು ಮಗುವಿನ ಗಾಢ ನಿದ್ರೆಗೆ ಅಡ್ಡಿಪಡಿಸುತ್ತದೆ. ಸ್ವಲ್ಪ ದೊಡ್ಡ ಮಕ್ಕಳಲ್ಲಿ ಕೆಟ್ಟ ಕನಸುಗಳು, ಕತ್ತಲೆಯ ಭಯ ಅಥವಾ ತಾಯಿಯಿಂದ ದೂರವಿರುವ ಆತಂಕ ನಿದ್ರಾಹೀನತೆಗೆ ಪ್ರಮುಖ ಕಾರಣಗಳಾಗಿವೆ.
ಪೋಷಕರು ಏನು ಮಾಡಬೇಕು?
ಮಗು ಪ್ರತಿದಿನ ರಾತ್ರಿ ಒಂದೇ ನಿಗದಿತ ಸಮಯಕ್ಕೆ ಮಲಗುವ ಮತ್ತು ಬೆಳಗ್ಗೆ ಏಳುವ ಅಭ್ಯಾಸವನ್ನು ರೂಢಿಸಬೇಕು.
ಮಲಗಲು ಕನಿಷ್ಠ1 ಗಂಟೆ ಇರುವ ಮುನ್ನವೇ ಮೊಬೈಲ್, ಟ್ಯಾಬ್ಲೆಟ್ ಮತ್ತು ಟಿವಿಗಳನ್ನು ಸಂಪೂರ್ಣವಾಗಿ ಆಫ್ ಮಾಡಬೇಕು.
ಮಲಗುವ ಕೋಣೆಯನ್ನು ಶಾಂತವಾಗಿ, ಕತ್ತಲಾಗಿ ಮತ್ತು ಸೂಕ್ತ ತಾಪಮಾನದಲ್ಲಿ ಇರುವಂತೆ ನೋಡಿಕೊಳ್ಳಬೇಕು.
ಮಗುವಿನ ನಿದ್ರಾಹೀನತೆಯು ದೀರ್ಘಕಾಲದವರೆಗೆ ಮುಂದುವರಿದು, ಹಗಲಿನಲ್ಲಿ ಮಗು ಅತಿಯಾಗಿ ಆಲಸಿ ಅಥವಾ ಸಿಡುಕಾಗುತ್ತಿದ್ದರೆ ತಕ್ಷಣ ಮಕ್ಕಳ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.



