ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಹೈವೋಲ್ಟೇಜ್ ಟೂರ್ನಿಯ ಹಬ್ಬ ಶುರುವಾಗಲಿದೆ. ಹತ್ತನೇ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದೆ. ಜೂನ್ 12 ರಿಂದ ಜುಲೈ 5 ರವರೆಗೆ ಇಂಗ್ಲೆಂಡ್ ಮತ್ತು ವೇಲ್ಸ್ ಜಂಟಿಯಾಗಿ ಈ ಮೆಗಾ ಟೂರ್ನಿಗೆ ಆತಿಥ್ಯ ವಹಿಸಲಿವೆ. ಒಟ್ಟು 24 ದಿನಗಳ ಕಾಲ ನಡೆಯಲಿರುವ ಈ ಕ್ರಿಕೆಟ್ ಹಬ್ಬದಲ್ಲಿ 12 ಬಲಿಷ್ಠ ತಂಡಗಳು ಭಾಗವಹಿಸುತ್ತಿದ್ದು, ಒಟ್ಟು 33 ಪಂದ್ಯಗಳು ಜರುಗಲಿವೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ.
ಇತಿಹಾಸದಲ್ಲೇ ದಾಖಲೆಯ ಬಹುಮಾನ ಮೊತ್ತ: ಬರೋಬ್ಬರಿ 83 ಕೋಟಿ ರೂ.!
ಈ ಬಾರಿಯ ವಿಶ್ವಕಪ್ನ ಪ್ರಮುಖ ಆಕರ್ಷಣೆ ಎಂದರೆ ಅದು ಬಹುಮಾನದ ಹಣ. ಮಹಿಳಾ ಕ್ರಿಕೆಟ್ ಅನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಟ್ಟು ಬಹುಮಾನದ ಮೊತ್ತವನ್ನು ಬರೋಬ್ಬರಿ 83 ಕೋಟಿ ರೂಪಾಯಿಗಳಿಗೆ ಏರಿಸಲಾಗಿದೆ. ಯುಎಇಯಲ್ಲಿ ನಡೆದ ಕಳೆದ ಆವೃತ್ತಿಯ ವಿಶ್ವಕಪ್ನಲ್ಲಿ 74 ಕೋಟಿ ರೂ. ಬಹುಮಾನ ನೀಡಲಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇಕಡಾ 10 ರಷ್ಟು ಹಣವನ್ನು ಹೆಚ್ಚಿಸಲಾಗಿದೆ. ವಿಶೇಷವೆಂದರೆ, ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ 12 ತಂಡಗಳಿಗೆ ಕನಿಷ್ಠ ತಲಾ 2.06 ಕೋಟಿ ರೂಪಾಯಿಗಳ ಖಚಿತ ಬಹುಮಾನದ ಮೊತ್ತ ಸಿಗಲಿದೆ.
ಯಾವ ತಂಡಕ್ಕೆ ಎಷ್ಟು ಹಣ ಸಿಗಲಿದೆ ಎಂಬ ವಿವರ ಇಲ್ಲಿದೆ:
- ವಿಜೇತ ತಂಡಕ್ಕೆ 21.8 ಕೋಟಿ ರೂ.
- ರನ್ನರ್ ಅಪ್ ತಂಡಕ್ಕೆ: 10 ಕೋಟಿ ರೂ.
- ಸೆಮಿಫೈನಲಿಸ್ಟ್ಗಳಿಗೆ: ತಲಾ 6.29 ಕೋಟಿ ರೂ.
- ಗ್ರೂಪ್ ಹಂತದ ಪಂದ್ಯ ಗೆದ್ದರೆ: ಪ್ರತಿ ಪಂದ್ಯಕ್ಕೆ 29 ಲಕ್ಷ ರೂ.
ಟೂರ್ನಿಯ ಫಾರ್ಮ್ಯಾಟ್ನಲ್ಲಿ ಬದಲಾವಣೆ: ಕಳೆದ ಬಾರಿ ಯುಎಇಯಲ್ಲಿ ನಡೆದ ಟೂರ್ನಿಯಲ್ಲಿ ಕೇವಲ 10 ತಂಡಗಳು ಮಾತ್ರ ಕಣಕ್ಕಿಳಿದಿದ್ದವು. ಆದರೆ ಈ ಬಾರಿ ಸ್ಪರ್ಧೆಯನ್ನು ಮತ್ತಷ್ಟು ರೋಚಕಗೊಳಿಸಲು ತಂಡಗಳ ಸಂಖ್ಯೆಯನ್ನು 12ಕ್ಕೆ ಏರಿಸಲಾಗಿದೆ.



