June 4, 2026
Thursday, June 4, 2026
spot_img

ಹಾವೇರಿ ಜಿಲ್ಲೆಯ ಮತದಾರರೇ ಗಮನಿಸಿ: ಜೂ.20ರಿಂದ ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ ಅಧಿಕಾರಿಗಳು

ಹೊಸದಿಗಂತ ಹಾವೇರಿ:

ಭಾರತ ಚುನಾವಣಾ ಆಯೋಗದ ನಿರ್ದೇಶನದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾಲ ಕಾಲಕ್ಕೆ ಆಗುತ್ತಲೇ ಇರುತ್ತದೆ. 1950ರಿಂದ ಇದುವರೆಗೂ ದೇಶಾದ್ಯಂತ ಆರು ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಆಗಿದೆ. ಅದರ ಮುಂದಿನ ಭಾಗವಾಗಿ ಭಾರತ ಚುನಾವಣಾ ಆಯೋಗದಿಂದ ಇದೀಗ ದೇಶಾದ್ಯಂತ 2025ರಿಂದ ಆರಂಭವಾಗಿದ್ದು, ನಮ್ಮ ರಾಜ್ಯದಲ್ಲಿ ಈಗ ಚಾಲನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದೇಶಾದ್ಯಂತ ಎರಡು ಹಂತದಲ್ಲಿ 2002ರಲ್ಲಿ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ ನಡೆದಿತ್ತು. ಭಾರತ ಚುನಾವಣಾ ಆಯೋಗವು ರಾಜ್ಯದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಪಟ್ಟಿ ತಯಾರಿಸುವ ಕುರಿತು ವೇಳಾಪಟ್ಟಿ ಪ್ರಕಟಿಸಿದ್ದು, ಅದರಂತೆ ಜೂ.20ರಿಂದ ಜಿಲ್ಲೆಯಲ್ಲಿ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಬೇರೆಡೆ ವರ್ಗಾವಣೆ ಅಥವಾ ಸ್ಥಳಾಂತರದಿಂದ ಎರಡು ಕಡೆ ನೋಂದಣಿ ಆಗಿದ್ದನ್ನು ಸರಿಪಡಿಸಲು ಹಾಗೂ ನಿಧನರಾದವರನ್ನು ಪಟ್ಟಿಯಿಂದ ತೆಗೆದುಹಾಕಲಾಗುವುದು. ಇನ್ನು ಈ ಕುರಿತ ತಪ್ಪು ಮಾಹಿತಿ ಅಥವಾ ವದಂತಿಗಳನ್ನು ಸಾರ್ವಜನಿಕರು ನಂಬದೇ ನಿಮ್ಮ ವ್ಯಾಪ್ತಿಯ ಬಿಎಲ್‌ಒಗಳ ಮೂಲಕ ಸಮಗ್ರ ಮಾಹಿತಿ ಪಡೆಯಬಹುದು ಹಾಗೂ ನೋಂದಣಿ ಮಾಡಿಕೊಳ್ಳಬೇಕು ಎಂದರು.

ಜೂ.20ರಿಂದ 29ರ ವರೆಗೆ ಚುನಾವಣಾ ಸಿಬ್ಬಂದಿಗೆ ತರಬೇತಿ, ಪೂರ್ವಸಿದ್ಧತೆ ಮುದ್ರಣ ಕಾರ್ಯ ಜರುಗಲಿದೆ. ಜೂ.30ರಿಂದ ಜು.29ರ ವರೆಗೆ ಒಂದು ತಿಂಗಳ ಕಾಲ ಬಿ.ಎಲ್.ಓ.ಗಳು ಪ್ರತಿ ಮತದಾರರ ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಜತೆಗೆ ಇದೇ ಅವಧಿಯಲ್ಲಿ ಮತಗಟ್ಟೆಗಳ ಪುರ‍್ರಚನೆಯ ಕೆಲಸವೂ ನಡೆಯಲಿದೆ. ಆ.5ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ.

ಈ ಕರಡು ಪಟ್ಟಿಗೆ ಸೆ.4ರ ವರೆಗೆ ಆಕ್ಷೇಪಣೆ ಅಥವಾ ದೂರುಗಳಿದ್ದಲ್ಲಿ ಸಲ್ಲಿಸಹುದು. ಅ.3ರೊಳಗೆ ಆಕ್ಷೇಪಣೆಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಿ ಅಕ್ಟೋಬರ್ 7ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ವಿವರಿಸಿದರು.

ಈ ಮಹತ್ವದ ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಡಾ. ನಾಗರಾಜ ಎಲ್. ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !