September 26, 2026
Saturday, September 26, 2026
spot_img

ಹೆಚ್.ಡಿ. ಕುಮಾರಸ್ವಾಮಿ ಮನವೊಲಿಕೆ ಯಶಸ್ವಿ: ಪೋಲಿಸ್ ಭವನದಲ್ಲಿ ಧರಣಿ ಕೈಬಿಟ್ಟ ಬಿಡದಿ ಮಹಿಳೆಯರು

ಹೊಸದಿಗಂತ ವರದಿ ರಾಮನಗರ:

ತಮ್ಮ ಮೇಲೆ ನಡೆದ ಪೊಲೀಸರ ದಬ್ಬಾಳಿಕೆಯನ್ನು ಖಂಡಿಸಿ ಭೈರಮಂಗಲದ ರೈತರು ಮತ್ತು ರೈತ ಮಹಿಳೆಯರು ಚನ್ನಪಟ್ಟಣದ ಪೊಲೀಸ್ ಭವನದಲ್ಲಿ ಮುಂದುವರಿಸಿದ್ದ ಧರಣಿಯನ್ನು ಕೇಂದ್ರ ಸಚಿವರಾದ ಹೆಚ್‍.ಡಿ. ಕುಮಾರಸ್ವಾಮಿ ಅವರು ಮನವೊಲಿಸಿದ ನಂತರ ಹಿಂದಕ್ಕೆ ತೆಗೆದುಕೊಂಡರು.

ಬಿಡದಿ ಉಪನಗರ ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿರುವ ಬೈರಮಂಗಲ ಭಾಗದ ಹತ್ತಾರು ಹಳ್ಳಿಗಳ ರೈತರು ರೈತ ಮಹಿಳೆಯರು ಕಳೆದ 568 ದಿನಗಳಿಂದ ಬೈರಮಂಗಲ ವೃತದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಕಳೆದ ಐದು ದಿನಗಳಿಂದ ಉಪವಾಸ ಸತ್ಯಾಗ್ರಹಕ್ಕೆ ಕೂತಿದ್ದರು. ಆದರೆ ಬಿಸಿಲಿನ ಕಾರಣಕ್ಕೆ ಪೆಂಡಾಲ್ ಹಾಕಿಕೊಂಡು ಉಪವಾಸ ಕೂರಲು ಪ್ರಯತ್ನಿಸಿದ್ದ ರೈತರು ಮತ್ತು ರೈತ ಮಹಿಳೆಯರನ್ನು ನಿನ್ನೆಯ ದಿನ ಪೊಲೀಸರು ಏಕಾಏಕಿ ವಶಕ್ಕೆ ಪಡೆದು ಹಲವಾರು ಜಾಗಗಳಿಗೆ ತೆರಳಿಸಿ ಕೂಡಿ ಹಾಕಿದ್ದರು.

ವಿಷಯ ತಿಳಿದ ಕೂಡಲೇ ರೈತರೊಂದಿಗೆ ಮಾತುಕತೆ ಬದುಕದೆ ನಡೆಸಿ ದೈರ್ಯ ಹೇಳಿದ್ದ ಕೇಂದ್ರ ಸಚಿವರು, ಇಂದು ಚನ್ನಪಟ್ಟಣದ ಪೊಲೀಸ್ ಭವನಕ್ಕೆ ತೆರಳಿ ಪ್ರತಿಭಟನಾನಿರತರಿಗೆ ಸಾಂತ್ವನ ಹೇಳಿದರು ಹಾಗೂ ಪ್ರತಿಭಟನೆ ವಾಪಸ್ ಪಡೆದು ಬೈರಮಂಗಲದಲ್ಲಿಯೇ ಶಾಂತಿಯುತವಾಗಿ ಸತ್ಯಾಗ್ರಹ ಮುಂದುವರಿಸುವಂತೆ ಮನವಿ ಮಾಡಿದರು. ಅಲ್ಲದೆ ಬಿಡದಿಯ ಭಾಗದ ಭೂಮಿಯ ವಶಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಮತ್ತೊಮ್ಮೆ ಸಚಿವರು ರೈತರಿಗೆ ಭರವಸೆ ನೀಡಿದರು.

ಸ್ಥಳಕ್ಕೆ ಬಂದ ಕೂಡಲೇ ಸಚಿವರ ಮುಂದೆ ತಮ್ಮ ದುಃಖವನ್ನು ತೋಡಿಕೊಂಡ ರೈತ ಮಹಿಳೆಯರು; ತಮ್ಮ ಮೇಲೆ ಪೊಲೀಸರು ಅಮಾನುಷವಾಗಿ ದಬ್ಬಾಳಿಕೆ ನಡೆಸಿದರು. ಅನೇಕ ಮಹಿಳೆಯರು ಈ ಸಂದರ್ಭದಲ್ಲಿ ಗಾಯಗೊಂಡರು. ಒಬ್ಬ ಮಹಿಳೆಯಂತು ಪ್ರಜ್ಞಾಹೀನ ಸ್ಥಿತಿಗೆ ತಲುಪಿ ಆಸ್ಪತ್ರೆ ಸೇರುವಂತಾಯಿತು. ಆದರೂ ಪೊಲೀಸರು ನಿರ್ದಯವಾಗಿ ತಮ್ಮ ಮೇಲೆ ದೌರ್ಜನ್ಯ ನಡೆಸಿದರು ಎಂದು ದೂರಿದರು.

ಮಹಿಳೆಯರ ಕಣ್ಣೀರನ್ನು ಕಂಡು ಪೊಲೀಸರ ವಿರುದ್ಧ ತೀವ್ರ ಕೆಂಡಮಂಡಲರಾದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇನ್ನಿತರ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ರೈತ ಮಹಿಳೆಯರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಅವರೆಂದು ಕಾನೂನನ್ನು ಕೈಗೆತ್ತುಕೊಂಡು ಹೋರಾಟ ಮಾಡಿದವರಲ್ಲ. ತಮ್ಮ ಏಕೈಕ ಆಧಾರವಾದ ಭೂಮಿಯನ್ನು ರಕ್ಷಿಸಿಕೊಳ್ಳಲು ಹೋರಾಟದ ದಾರಿ ಹಿಡಿದಿದ್ದಾರೆ. ಆದರೆ ನೀವೆಲ್ಲರೂ ಈ ಭೂಮಿಯನ್ನು ಕೊಳ್ಳೆ ಹೊಡೆಯಲು ಮುಂದಾಗಿರುವ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಿ ರೈತ ಮಹಿಳೆಯರ ಮೇಲೆ ದೌರ್ಜನ್ಯ ಎಸೆಗಿದ್ದೀರಿ. ಇಂಥ ತಪ್ಪೆಚಿಗಿದ ಪೊಲೀಸ್ ಸಿಬ್ಬಂದಿಯನ್ನು ತಕ್ಷಣ ಸಸ್ಪೆಂಡ್ ಮಾಡಬೇಕು ಹಾಗೂ ಈ ಘಟನೆ ನಡೆದ ಸಂದರ್ಭದಲ್ಲಿ ಪಟಾಕಿಗಳನ್ನು ತಿಳಿಸಿ ವಿಕೃತ ಸಂಭ್ರಮ ಆಚರಿಸಿದ ದುರುಳರನ್ನು ಬಂಧಿಸಿ ಪಾಠ ಕಲಿಸಬೇಕು. ನಿಮಗೆ ಎರಡು ದಿನ ಸಮಯ ಕೊಡುತ್ತಿದ್ದೇನೆ. ಈ ಕ್ರಮ ಕೈಗೊಳ್ಳದಿದ್ದರೆ ನಾನು ಬೆಂಗಳೂರು ಮೈಸೂರು ಹೆದ್ದಾರಿಯನ್ನು ಬಂದ್ ಮಾಡಬೇಕಾಗುತ್ತದೆ ಎಂದು ಪೊಲೀಸರಿಗೆ ಸಚಿವರು ಎಚ್ಚರಿಕೆ ನೀಡಿದರು.

ಸಂದರ್ಭದಲ್ಲಿ ಕೇಂದ್ರ ವಲಯದ ಐಜಿಪಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಚರ್ಚೆ ನಡೆಸಿದ ಸಚಿವರು ಪೊಲೀಸರ ನಡವಳಿಕೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಳ್ಳಕಾಕರು, ಭೂಗಳಲ್ಲರನ್ನು ಸುಮ್ಮನೆ ಬಿಡುತ್ತೀರಿ. ಪರಂಪರಾಗತವಾಗಿ ತಾವು ನಂಬಿ ಬರುತ್ತಿರುವ ಭೂಮಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವ ಅಮಾಯಕ ರೈತ ಮಹಿಳೆಯರ ಮೇಲೆ ನಿಮ್ಮ ದರ್ಪ ತೋರಿಸಲು ಹೋಗುತ್ತೀರಿ. ನಿಮ್ಮ ಗೃಹ ಸಚಿವರಿಗೆ ನಾಚಿಕೆಯಾಗಬೇಕು ಎಂದು ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಾನು ಯಾವುದೇ ಪಕ್ಷದ ಪರವಾಗಿ ಬಂದಿಲ್ಲ. ಕೇವಲ ರೈತರ ಹಿತಾಸಕ್ತಿಯ ದೃಷ್ಟಿಯಿಂದ ಮಾತ್ರ ಬಂದಿದ್ದೇನೆ ಎಂದು ಗುಡುಗಿದೆ ಕೇಂದ್ರ ಸಚಿವರು; ಉಪವಾಸ ಸತ್ಯಾಗ್ರಹ ಮಾಡದಂತೆ ಮಹಿಳೆಯರಿಗೆ ಹೇಳಿದ್ದೇನೆ. ಶಾಂತಿಯುತ ಪ್ರತಿಭಟನೆ ನಿಲುವು ತೆಗೆದುಕೊಂಡಿದ್ದಾರೆ. ರೈತರ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಸರ್ಕಾರ ನಿನ್ನೆ ಏಕಾಏಕಿ ಪ್ರತಿಭಟಾನಿರತ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗಿದೆ. ಎಲ್ಲದಕ್ಕೂ ಮಾತನಾಡುವ ಗೃಹಸಚಿವರು ಈಗ ಯಾವ ಕ್ರಮ ತೆಗೆದುಕೊಂಡಿದ್ದಾರೆ? ಕಾಂಗ್ರೆಸ್ ಪುಡಾರಿಗಳು, ಸಿಎಂ ಏಜೆಂಟ್‌ಗಳು ರೈತರಿಗೆ ಅಶ್ಲೀಲವಾಗಿ ಬೈದಿದ್ದಾರೆ. ಪ್ರಾಮಾಣಿಕವಾಗಿ ಹೋರಾಟ ಮಾಡುವವರನ್ನ ಅವಮಾನಿಸಿದ್ದಾರೆ. ಅಂತಹವರಿಗೆ ಪೊಲೀಸರ ಬೆಂಬಲ ದೊರೆಯುತ್ತಿದೆ. ದೌರ್ಜನ್ಯ ಎಸಗಿದ ಪೊಲೀಸರ ಮೇಲೆ ಕ್ರಮ ಆಗಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದು ಪಕ್ಷದ ಹೋರಾಟವಲ್ಲ. ಭಾವನೆಗಲ್ಲ ಬದುಕಿಗಾಗಿ ಹೋರಾಟ ಅಂತ ಮುಖ್ಯಮಂತ್ರಿ ಹೇಳಿದ್ದಾರಲ್ಲವೇ? ಈಗ ರೈತರಿಗೆ ಅವರ ಬದುಕು ನೀಡಲಿ. ಮುಖ್ಯಮಂತ್ರಿ ಬರೀ ಹೇಳಿಕೆ ಕೊಟ್ಟರೆ ಆಗಲ್ಲ. ತಪ್ಪು ಸರಿಪಡಿಸಿಕೊಳ್ಳದೇ ಇದ್ದರೆ ವಿಠಲೇನಹಳ್ಳಿ ಗೋಲಿಬಾರ್ ಪ್ರಕರಣ ನೆನಪಿಸಲು ಬಯಸುತ್ತೇನೆ. ಅಂತಹ ಪರಿಸ್ಥಿತಿಯನ್ನು ಪುನಃ ಜಿಲ್ಲೆಗೆ ತರಬೇಡಿ ಎಂದು ಎಚ್ಚರಿಕೆ ನೀಡಿದರು.

ಐಜಿ ಗಿರೀಶ್ ಅವರಿಗೆ ಪೋನ್ ಕರೆ ಮಾಡಿದ ಸಚಿವರು; ಮಹಿಳೆಯರ ಮೇಲೆ ದರ್ಪ ತೋರಿದ ಪೊಲೀಸ್ ಬಂದಿ ಬಗ್ಗೆ ಇವರ ಅಸಮಾಧಾನ ವ್ಯಕ್ತಪಡಿಸಿದರು. ಮಹಿಳೆಯರ ಮೇಲೆ ನಿನ್ನೆ ದೌರ್ಜನ್ಯ ಆಗಿದೆ. ಅಮಾನವೀಯವಾಗಿ ಅವರ ಬಂಧನ ಮಾಡಲಾಗಿದೆ. ಅವರ ಬಟ್ಟೆಗಳನ್ನ ಸಹ ಹರಿದಿವೆ. ಆ ಪೊಲೀಸರನ್ನ ಕೂಡಲೇ ಸಸ್ಪೆಂಡ್ ಮಾಡಬೇಕು. ಇದರ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕು. ಟೌನ್ ಶಿಪ್ ಪರ ಇರುವವರು ರೈತರನ್ನ ಅವಾಚ್ಯ ಶಬ್ದಗಳಿಂದ ಬಂದಿದ್ದಾರೆ, ಅವರ ವಿರುದ್ಧವೂ ಕ್ರಮ ಆಗಬೇಕು. ನನಗೆ ದೆಹಲಿಗಿಂತ ರೈತರ ಹಿತ ಮುಖ್ಯ. ನೀವು ಆ್ಯಕ್ಷನ್ ತೆಗೆದುಕೊಳ್ಳದಿದ್ದರೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 10 ಸಾವಿರ ಜನರನ್ನ ಸೇರಿಸಿ ಪ್ರತಿಭಟನೆ ಮಾಡ್ತೀನಿ ಎಂದು ಎಚ್ಚರಿಕೆ ನೀಡಿದರು.

ನಾನು ಕೂಡ ಹಿಂದಕ್ಕೆ ಸರಿಯುವ ವ್ಯಕ್ತಿಯಲ್ಲ. ಹೆದ್ದಾರಿಯಲಿ ನಾನು ರೈತರೊಂದಿಗೆ ಕೂರುತ್ತೇನೆ. ಎಷ್ಟು ಜನ ಪೊಲೀಸರನ್ನು ತರುತ್ತೀರೋ ತನ್ನಿ. ನನಗೆ ಎರಡು ದಿನ ಸಮಯ ಸಾಕು, ಹೆದ್ದಾರಿಯಲ್ಲಿ 50,000 ಜನರನ್ನು ಸೇರಿಸುತ್ತೇನೆ. ಹೆಣ್ಣು ಮಕ್ಕಳ ಕಣ್ಣಲ್ಲಿ ಈ ಸರಕಾರಕ್ಕೆ ರಾಜಕೀಯ ಆಗ್ಬೇಕು. ಸರ್ಕಾರಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಸಚಿವರು ಗುಡುಗಿದರು.

ಸರ್ಕಾರ ರಚಿಸಿದ ಸಮಿತಿ ಎಲ್ಲಿ ಹೋಯಿತು?

ಬಿಡದಿ ಉಪನಗರ ಯೋಜನೆ ಬಗ್ಗೆ ಮತ್ತು ಅಲ್ಲಿನ ರೈತರ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಲು ಮುಖ್ಯಮಂತ್ರಿ ನೇಮಕ ಮಾಡಿದ್ದ ಸಮಿತಿ ಎಲ್ಲಿ ಹೋಯಿತು ಎಂದು ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು ಪ್ರಶ್ನಿಸಿದರು.

ನನಗೆ ಆ ಸಮಿತಿಯ ಮುಖ್ಯಸ್ಥರ ಬಗ್ಗೆ ಮಾಹಿತಿ ಇದೆ. ಇಂದೇ ಇದೆ ವ್ಯಕ್ತಿ ನ್ಯಾಯಾಧೀಶರಾಗಿ ಈಗಲ್ಟನ್ ಪ್ರಕರಣದಲ್ಲಿ ಎಕರೆಗೆ 12 ಕೋಟಿ ಬೆಲೆಯನ್ನು ನಿಗದಿ ಮಾಡಿದರು. ಆದೇಶವನ್ನು ಕೊಟ್ಟು ಹತ್ತು ವರ್ಷಗಳಿಗೂ ಹೆಚ್ಚು ಕಾಲವಾಗಿದೆ. ಆಗಿದ್ದ ಮೇಲೆ ಆ ಭೂಮಿಗೆ ಈಗ ಎಷ್ಟು ಬೆಲೆ ಬಂದಿರಬಹುದು? ಕನಿಷ್ಠ ಎಕರೆಗೆ 30 ರಿಂದ 35 ಕೋಟಿ ಬೆಲೆ ಇರುತ್ತದೆ. ಅಷ್ಟು ಹಣವನ್ನು ಅವರು ಸರ್ಕಾರದಿಂದ ರೈತರಿಗೆ ಕೊಡಲಿ. ಭೂಮಿಯನ್ನು ಬಿಟ್ಟು ಕೊಡಿ ಎಂದು ನಾನೇ ರೈತರ ಮನವೊಲಿಸುತ್ತೇನೆ ಎಂದು ಸಚಿವರು ಹೇಳಿದರು.

ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎ. ಮಂಜುನಾಥ್, ಮಾಜಿ ಸಚಿವರಾದ ಬಂಡೆಪ್ಪ ಕಾಶಂಪುರ್, ವೆಂಕಟರಾವ್ ನಾಡಗೌಡ, ಶಾಸಕರಾದ ಮಂಜೇಗೌಡ, ಎಂ ಟಿ ಕೃಷ್ಣಪ್ಪ, ಕೋಲಾರ ಸಂಸದ ಮಲ್ಲೇಶ್ ಬಾಬು, ಮಾಜಿ ಶಾಸಕ ರಾಜ ವೆಂಕಟಪ್ಪ ನಾಯಕ, ಹೆಚ್ ಎಂ ರಮೇಶ್ ಗೌಡ, ಕೆಎ ತಿಪ್ಪೇಸ್ವಾಮಿ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

Must Read