ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಲೋಕಸಭಾ ಅಧಿವೇಶನದಲ್ಲಿ ಅಂಗೀಕಾರ ಪಡೆಯಲು ವಿಫಲವಾಗಿದ್ದ ಬಹುನಿರೀಕ್ಷಿತ ‘ಮತಕ್ಷೇತ್ರಗಳ ಪುನರ್ ವಿಂಗಡಣೆ’ ವಿಧೇಯಕವನ್ನು ಮುಂಬರುವ ಮುಂಗಾರು ಅಧಿವೇಶನದಲ್ಲಿ ಮತ್ತೊಮ್ಮೆ ಮಂಡಿಸಲು ಕೇಂದ್ರ ಸರ್ಕಾರ ಭರಪೂರ ಸಿದ್ಧತೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಕೇಂದ್ರ, ದೇಶದ ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ ಮತ್ತು ಟಿಎಂಸಿ ನಾಯಕರೊಂದಿಗೆ ತೆರೆಮರೆಯ ಮಾತುಕತೆ ಆರಂಭಿಸಿದೆ.
ಸರ್ಕಾರದ ಪ್ರಸ್ತಾಪಕ್ಕೆ ಪ್ರಾದೇಶಿಕ ಪಕ್ಷಗಳ ಪ್ರತಿಕ್ರಿಯೆ ಹೇಗಿದೆ?
ವಿಶ್ವಾಸಾರ್ಹ ಮೂಲಗಳ ಪ್ರಕಾರ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸಂಸದರು ಸರ್ಕಾರದ ಈ ಪ್ರಸ್ತಾಪಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಕ್ಷೇತ್ರ ಪುನರ್ ವಿಂಗಡಣೆ ಕುರಿತು ಮುಕ್ತವಾಗಿ ಚರ್ಚಿಸಲು ತಾವು ಸಿದ್ಧರಿರುವುದಾಗಿ ಟಿಎಂಸಿ ನಾಯಕರು ತಿಳಿಸಿದ್ದಾರೆ.
ಇನ್ನೊಂದೆಡೆ, ಈ ಕಾಯ್ದೆಯ ವಿರುದ್ಧ ಮೊದಲಿನಿಂದಲೂ ತೀವ್ರ ಆತಂಕ ಹಾಗೂ ವಿರೋಧ ವ್ಯಕ್ತಪಡಿಸುತ್ತಿದ್ದ ತಮಿಳುನಾಡಿನ ಡಿಎಂಕೆ ಪಕ್ಷ ಕೂಡ ಈ ಬಾರಿ ಮೃದು ಧೋರಣೆ ತಳೆದಿದೆ ಎನ್ನಲಾಗಿದೆ. ಸದ್ಯಕ್ಕೆ ಯಾವುದೇ ನೇರ ವಿರೋಧ ವ್ಯಕ್ತಪಡಿಸದ ಡಿಎಂಕೆ, ಕೇಂದ್ರ ಸರ್ಕಾರ ಸಿದ್ಧಪಡಿಸುತ್ತಿರುವ ‘ಪರಿಷ್ಕೃತ ಮಸೂದೆ’ಯ ಪ್ರತಿಗಾಗಿ ಕಾಯುತ್ತಿದೆ ಎಂದು ತಿಳಿದುಬಂದಿದೆ.



