ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಯಚೂರು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಭಾರತ ವನ ಯೋಜನೆ’ಗೆ ಗಿಡ ನೆಡುವ ಮೂಲಕ ಅಧಿಕೃತ ಚಾಲನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾದ ‘ತಾಯಿಯ ಹೆಸರಿನಲ್ಲಿ ಒಂದು ಮರ’ ಅಭಿಯಾನಕ್ಕೂ ಚಾಲನೆ ನೀಡಲಾಯಿತು. ಇದೇ ವೇಳೆ ಸಚಿವರು ಶಾಲಾ ವಿದ್ಯಾರ್ಥಿಗಳೊಂದಿಗೆ ಪರಿಸರ ಸಂರಕ್ಷಣೆಯ ಕುರಿತು ಆಪ್ತ ಸಂವಾದ ನಡೆಸಿದರು.
ಯಕ್ಲಾಸಪುರದಲ್ಲಿ ಮಿಯಾವಾಕಿ ಅರಣ್ಯೀಕರಣ
ರಾಯಚೂರಿನ ಯಕ್ಲಾಸಪುರ ಘನತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ, ಭಾರತ ವನ ಯೋಜನೆಯಡಿ ಜಪಾನಿ ತಂತ್ರಜ್ಞಾನದ ಮಿಯಾವಾಕಿ ಪದ್ಧತಿ ಮೂಲಕ ನಿರ್ಮಿಸಲಾಗುತ್ತಿರುವ ಅರಣ್ಯೀಕರಣ ಕಾಮಗಾರಿಯನ್ನು ಸಚಿವರು ವರ್ಚುವಲ್ ಆಗಿ ಉದ್ಘಾಟಿಸಿದರು. ಇದು ಜಿಲ್ಲೆಯ ಹಸಿರು ವಲಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಆಕಾಂಕ್ಷಿ ಜಿಲ್ಲೆಗಳ ಪ್ರಗತಿ ಪರಿಶೀಲನೆ
ಇದಕ್ಕೂ ಮುನ್ನ ಶಕ್ತಿನಗರದ ಆರ್‌ಟಿಪಿಎಸ್ ಅತಿಥಿಗೃಹದಲ್ಲಿ ಮಹತ್ವಾಕಾಂಕ್ಷಿ ಜಿಲ್ಲೆಗಳಾದ ರಾಯಚೂರು ಮತ್ತು ಯಾದಗಿರಿಯ ಉನ್ನತ ಮಟ್ಟದ ಅಭಿವೃದ್ಧಿ ಪರಿಶೀಲನಾ ಸಭೆ ನಡೆಯಿತು. ಕೆಕೆಆರ್‌ಡಿಬಿ ಕಾರ್ಯದರ್ಶಿ ನಳೀನ್ ಅತುಲ್ ಹಾಗೂ ಎರಡೂ ಜಿಲ್ಲೆಗಳ ಉನ್ನತ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.



