June 5, 2026
Friday, June 5, 2026
spot_img

CINE | 300 ಕೋಟಿ ಗಳಿಸಿದ್ರೂ ಸೂರ್ಯ ಚಿತ್ರಕ್ಕೆ ತಪ್ಪದ ವಿವಾದ: ಎಡಿಟರ್ ಕ್ಷಮೆಯಾಚಿಸಿದ್ದು ಯಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಲಿವುಡ್ ಸ್ಟಾರ್ ನಟ ಸೂರ್ಯ ಅಭಿನಯದ ‘ಕರುಪ್ಪು’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದರೂ, ಈಗ ಹೊಸದೊಂದು ವಿವಾದದ ಸುಳಿಗೆ ಸಿಲುಕಿದೆ. ಚಿತ್ರದ ನಿರ್ದೇಶಕ ಹಾಗೂ ಎಡಿಟರ್ ನೀಡಿದ ಕೆಲವು ಹೇಳಿಕೆಗಳು ಸೂರ್ಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಮುನ್ನೆಲೆಗೆ ಬಂದಿದೆ.

ವಿವಾದದ ಕಿಡಿ ಹೊತ್ತಿಸಿದ್ದು ಹೇಗೆ?

‘ಕರುಪ್ಪು’ ಚಿತ್ರದ ಪ್ರಚಾರದ ವೇಳೆ ನಿರ್ದೇಶಕ ಆರ್‌ಜೆ ಬಾಲಾಜಿ ಅವರು, “ಈ ಕಥೆಯನ್ನು ಮೊದಲು ದಳಪತಿ ವಿಜಯ್ ಅವರಿಗೆ ಹೇಳಲಾಗಿತ್ತು. ಆದರೆ ಕೆಲವು ಕಾರಣಗಳಿಂದ ಅವರು ನಟಿಸಲು ಸಾಧ್ಯವಾಗಲಿಲ್ಲ” ಎಂದು ಬಹಿರಂಗಪಡಿಸಿದ್ದರು. ಇದರ ಬೆನ್ನಲ್ಲೇ, ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್ ಅವರನ್ನು ಭೇಟಿಯಾದ ಫೋಟೋ ಹಂಚಿಕೊಂಡ ಬಾಲಾಜಿ, ‘ಕರುಪ್ಪು ಚಿತ್ರವನ್ನು ಮೊದಲಿಗೆ ಶುರು ಮಾಡಿದ ವ್ಯಕ್ತಿ’ ಎಂದು ಬರೆದುಕೊಂಡಿದ್ದರು. ಇದು ಸೂರ್ಯ ಅಭಿಮಾನಿಗಳನ್ನು ಕೆರಳಿಸಿತು.

ಇದಕ್ಕೆ ತುಪ್ಪ ಸುರಿಯುವಂತೆ ಚಿತ್ರದ ಎಡಿಟರ್ ಆರ್. ಕಲೈವಾಣನ್, “ಒಂದು ವೇಳೆ ಈ ಸಿನಿಮಾದಲ್ಲಿ ವಿಜಯ್ ನಟಿಸಿದ್ದರೆ, ಅವರ ಸ್ಟಾರ್‌ಡಮ್‌ಗೆ ತಕ್ಕಂತೆ ದೃಶ್ಯಗಳು ಮತ್ತಷ್ಟು ಬ್ಲಾಸ್ಟಿಂಗ್ ಆಗಿರುತ್ತಿದ್ದವು” ಎಂದು ಸಂದರ್ಶನವೊಂದರಲ್ಲಿ ಹೋಲಿಕೆ ಮಾಡಿದ್ದರು. ಸಿನಿಮಾ ಸೂಪರ್ ಹಿಟ್ ಆಗಿರುವಾಗ ಸೂರ್ಯ ಅವರ ಶ್ರಮವನ್ನು ನಿರ್ಲಕ್ಷಿಸಿ, ಬೇರೆಯವರಿಗೆ ಕ್ರೆಡಿಟ್ ನೀಡಲಾಗುತ್ತಿದೆ ಎಂದು ಫ್ಯಾನ್ಸ್ ಆಕ್ರೋಶ ಹೊರಹಾಕಿದರು.

ಎಡಿಟರ್ ಬಹಿರಂಗ ಕ್ಷಮೆಯಾಚನೆ & ಸೂರ್ಯ ಪೋಸ್ಟ್

ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಎಡಿಟರ್ ಕಲೈವಾಣನ್ ಸೋಶಿಯಲ್ ಮೀಡಿಯಾದಲ್ಲಿ, “ಸೂರ್ಯ ಅಣ್ಣನ ಅಭಿಮಾನಿಗಳಿಗೆ ನಿಜಕ್ಕೂ ಕ್ಷಮೆ ಕೇಳುತ್ತೇನೆ. ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಬಳಸಿದ ಪದಗಳು ನನ್ನದೇ ತಪ್ಪು” ಎಂದು ಬಹಿರಂಗ ಕ್ಷಮೆ ಯಾಚಿಸಿದ್ದಾರೆ.

ಇತ್ತ ವಿವಾದ ತಾರಕಕ್ಕೇರುತ್ತಿದ್ದಂತೆ ನಟ ಸೂರ್ಯ ಯಾರ ಹೆಸರನ್ನೂ ಉಲ್ಲೇಖಿಸದೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, “ಪ್ರೀತಿಯಿಂದ ಮುನ್ನಡೆಯಿರಿ. ದಯೆ ಇರಲಿ. ಉದಾರವಾಗಿರಿ” ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳನ್ನು ಶಾಂತವಾಗಿರುವಂತೆ ಸೂಚಿಸಲು ಸೂರ್ಯ ಈ ಪೋಸ್ಟ್ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !