June 5, 2026
Friday, June 5, 2026
spot_img

ಕಂದಾಯ ಇಲಾಖೆಯೇ ಬೇಕಿತ್ತು, ಆದರೆ…: ಖಾತೆ ಬದಲಾವಣೆ ಬಗ್ಗೆ ಕೃಷ್ಣ ಬೈರೇಗೌಡ ಓಪನ್ ಟಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಬೆನ್ನಲ್ಲೇ ರಾಜಧಾನಿಯ ಉಸ್ತುವಾರಿ ಹೊತ್ತಿರುವ ನೂತನ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. “ಬೆಂಗಳೂರು ಅಭಿವೃದ್ಧಿ ಖಾತೆಯ ಜವಾಬ್ದಾರಿ ನಿರ್ವಹಿಸುವುದು ಅಷ್ಟು ಸುಲಭದ ಕೆಲಸವಲ್ಲ” ಎಂದು ಅವರು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಸಿಲಿಕಾನ್ ಸಿಟಿಯ ಜನರ ಜೀವನಮಟ್ಟವನ್ನು ಸುಧಾರಿಸುವುದೇ ತಮ್ಮ ಮೊದಲ ಮತ್ತು ಪ್ರಮುಖ ಗುರಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಂದಾಯ ಇಲಾಖೆ ಬಯಸಿದ್ದ ಕೃಷ್ಣ ಬೈರೇಗೌಡ!

ಖಾತೆ ಹಂಚಿಕೆ ಪ್ರಕ್ರಿಯೆಯ ಕುರಿತು ಮಾತನಾಡಿದ ಅವರು, “ನಾನು ಕಂದಾಯ ಇಲಾಖೆಯಲ್ಲೇ ಮುಂದುವರಿಯಲು ಇಚ್ಛಿಸಿದ್ದೆ. ಅಲ್ಲಿ ಈಗಾಗಲೇ ಆರಂಭಿಸಿರುವ ಹಲವು ಜನಪರ ಕೆಲಸಗಳನ್ನು ಪೂರ್ಣಗೊಳಿಸಲು ಕಾಲಾವಕಾಶ ನೀಡುವಂತೆ ಹೈಕಮಾಂಡ್ ಮತ್ತು ಸಿಎಂ ಬಳಿ ಮನವಿ ಮಾಡಿದ್ದೆ. ಆದರೆ, ಪಕ್ಷದ ನಾಯಕತ್ವವು ನನ್ನ ಮೇಲೆ ನಂಬಿಕೆ ಇಟ್ಟು ಬೆಂಗಳೂರು ಅಭಿವೃದ್ಧಿಯ ಅತ್ಯಂತ ಮಹತ್ವದ ಜವಾಬ್ದಾರಿಯನ್ನು ನೀಡಿದೆ” ಎಂದು ತಿಳಿಸಿದರು.

ಸಿಲಿಕಾನ್ ಸಿಟಿ ಸವಾಲುಗಳ ಬಗ್ಗೆ ಸಚಿವರ ಮಾತು:

ಬೆಂಗಳೂರು ನಗರ ಎದುರಿಸುತ್ತಿರುವ ಜಟಿಲ ಸಮಸ್ಯೆಗಳ ಬಗ್ಗೆ ಮಾತನಾಡಿದ ಸಚಿವರು, “ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಎಂಬುದು ಒಂದು ದೊಡ್ಡ ಸವಾಲು. ನಗರದಲ್ಲಿ ಮೂಲಸೌಕರ್ಯ, ಸಂಚಾರ ದಟ್ಟಣೆ ಸೇರಿದಂತೆ ಸಾಲು ಸಾಲು ಸಮಸ್ಯೆಗಳಿವೆ. ಅಧಿಕಾರ ವಹಿಸಿಕೊಂಡ ತಕ್ಷಣವೇ ಎಲ್ಲ ಸಮಸ್ಯೆಗಳನ್ನು ಮಂತ್ರದಂಡದಂತೆ ಪರಿಹರಿಸುತ್ತೇನೆ ಎಂದು ನಾನು ಸುಳ್ಳು ಭರವಸೆ ನೀಡುವುದಿಲ್ಲ. ಆದರೆ, ಹಂತ ಹಂತವಾಗಿ ಸುಧಾರಣೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !